ಕರ್ನಾಟಕ

karnataka

ETV Bharat / state

8 ನಾಯಿಮರಿಗಳ ಸಾವಿಗೆ ಕಾರಣವಾದ ವೃದ್ಧೆಯ ಶಿಕ್ಷೆ ಪ್ರಮಾಣ ಹೆಚ್ಚಿಸಲು ನಿರಾಕರಿಸಿದ ಹೈಕೋರ್ಟ್ - ವಿಚಾರಣಾ ನ್ಯಾಯಾಲಯ

20 ದಿನಗಳ ಎಂಟು ನಾಯಿಮರಿಗಳನ್ನು ತಾಯಿಯಿಂದ ದೂರ ಮಾಡಿ, ಸೂಕ್ತ ಸಮಯಕ್ಕೆ ಮರಿಗಳಿಗೆ ಹಾಲು ಸಿಗದೆ ಸಾವನ್ನಪ್ಪಲು ಆರೋಪಿ ಮಹಿಳೆ ಪೊನ್ನಮ್ಮ ಕಾರಣವಾಗಿದ್ದರು.

High Court
ಹೈಕೋರ್ಟ್​

By ETV Bharat Karnataka Team

Published : Jan 17, 2024, 7:30 PM IST

ಬೆಂಗಳೂರು: ಎಂಟು ನಾಯಿಮರಿಗಳ ಸಾವಿಗೆ ಕಾರಣವಾಗಿದ್ದ 72 ವರ್ಷದ ವೃದ್ಧೆಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 1 ಸಾವಿರ ರೂ. ದಂಡವನ್ನು ಹೆಚ್ಚಳ ಮಾಡುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ನಾಯಿಮರಿ ಸಾವಿಗೆ ಕಾರಣವಾಗಿದ್ದ ಆರೋಪಿಗೆ ಕೇವಲ 1 ಸಾವಿರ ದಂಡ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಾಣಿ ಕಲ್ಯಾಣ ಅಧಿಕಾರಿ ಕೆ.ಬಿ. ಹರೀಶ್​ ಎಂಬುವರು ಹೈಕೋರ್ಟ್​ಗೆ ಕ್ರಿಮಿನಲ್​ ಪುನರ್​ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ ಎಂ ಖಾಜಿ ಅವರಿದ್ದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅಲ್ಲದೆ, ಪ್ರಕರಣ ನಡೆದ ಸಂದರ್ಭ ಆರೋಪಿ ಪೊನ್ನಮ್ಮ ಅವರಿಗೆ 65 ವರ್ಷವಾಗಿತ್ತು. ಪ್ರಸ್ತುತ 72 ವರ್ಷ ವಯಸ್ಸಾಗಿದೆ. ಜತೆಗೆ, ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ವಿವೇಚನಾಧಿಕಾರ ಬಳಸಿ ಆಕೆಗೆ ಶಿಕ್ಷೆ (1ಸಾವಿರ ದಂಡ) ವಿಧಿಸಿದ್ದಾರೆ. ದಂಡದ ಮೊತ್ತವನ್ನೂ ಪಾವತಿ ಮಾಡಲಾಗಿದೆ ಎಂದು ತಿಳಿಸಿದ ನ್ಯಾಯಪೀಠ, ಶಿಕ್ಷೆ ಪ್ರಮಾಣ ಹೆಚ್ಚಳ ಮಾಡುವುದಕ್ಕೆ ನಿರಾಕರಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?:2016 ರ ಮಾ.15 ರಂದು ಆರೋಪಿ ಪೊನ್ನಮ್ಮ ಮನೆಯ ಮುಂದೆ ಚರಂಡಿಯಲ್ಲಿ ನಾಯಿಯೊಂದು ಎಂಟು ಮರಿಗಳನ್ನು ಹಾಕಿತ್ತು. ಅದರ ಗದ್ದಲದಿಂದ ಬೇಸತ್ತಿದ್ದ ಮಹಿಳೆ 20 ದಿನದ ನಾಯಿ ಮರಿಗಳನ್ನು ಚರಂಡಿಯಿಂದ ತೆಗೆದು ಖಾಲಿ ನಿವೇಶನದಲ್ಲಿರಿಸಿದ್ದರು. ಇದರಿಂದ ತಾಯಿ ನಾಯಿ ಮರಿಗಳ ಬಳಿಗೆ ಮತ್ತು ಮರಿಗಳು ತಾಯಿ ಬಳಿಗೆ ಹೋಗುವುದಕ್ಕೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಮರಿಗಳಿಗೆ ಸೂಕ್ತ ಸಮಯಕ್ಕೆ ತಾಯಿಯ ಹಾಲು ಸಿಗದೆ ಸಾವನ್ನಪ್ಪಿದ್ದವು.

ಪ್ರಕರಣ ಸಂಬಂಧ ಹರೀಶ್​ ಪೊಲೀಸರಿಗೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಬಳಿಕ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ಐಪಿಸಿ, ಕರ್ನಾಟಕ ಪೊಲೀಸ್​ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯಕ್ಕೆ, ಆರೋಪಿ ಮಹಿಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಈ ಅಂಶವನ್ನು ದಾಖಲಿಸಿಕೊಂಡಿದ್ದ ಮ್ಯಾಜಿಸ್ಟ್ರೇಟ್​ ನ್ಯಾಯಾಧೀಶರು, 1 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹರೀಶ್​ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಸೇಷನ್ಸ್​ ನ್ಯಾಯಾಲಯ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ನಿರಾಕರಿಸಿ, ಮ್ಯಾಜಿಸ್ಟ್ರೇಟ್​ ನ್ಯಾಯಾಧೀಶರ ವಿವೇಚನಾಧಿಕಾರ ಬಳಸಿ ಶಿಕ್ಷೆ ವಿಧಿಸಿದ್ದಾರೆ. ಹೀಗಾಗಿ ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಪುನರ್​ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಯ ಅಪರಾಧಕ್ಕೆ ಅನುಗುಣವಾಗಿ ಶಿಕ್ಷೆ ವಿಧಿಸಿಲ್ಲ. ಜಗತ್ತಿನ ಎಲ್ಲ ಜೀವಿಗಳ ಕುರಿತು ಕರುಣೆ ಹಾಗೂ ಸಹಾನುಭೂತಿ ತೋರುವುದು ನಾಗರೀಕನ ಕರ್ತವ್ಯ. ಆದ್ದರಿಂದ ಆಕೆಗೆ ವಿಧಿಸಿದ್ದ ದಂಡ ಹೆಚ್ಚಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದ್ದರು.

ಇದನ್ನೂ ಓದಿ:ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ರದ್ದಾದ ತಮ್ಮ ವಿರುದ್ಧದ ಪ್ರಕರಣಗಳ ಮಾಹಿತಿಯನ್ನೂ ಒದಗಿಸಬೇಕು: ಹೈಕೋರ್ಟ್

ABOUT THE AUTHOR

...view details