ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹಾಗೂ ಸಕ್ರಿಯ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ. ಜೊತೆಗೆ ಕೊರೊನಾದಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿರುವವರ ಪ್ರಮಾಣದಲ್ಲಿಯೂ ಇಳಿಕೆ ದಾಖಲಾಗುತ್ತಿದೆ.
ನವೆಂಬರ್ 14 ರಂದು 773 ಮಂದಿ ತೀವ್ರ ನಿಗಾ ಘಟಕದಲ್ಲಿದ್ದರು. ಈ ಸಂಖ್ಯೆ ಡಿಸೆಂಬರ್ 1 ರಂದು 336 ಕ್ಕೆ ಇಳಿಕೆಯಾಗಿದೆ. ಅಂದರೆ ಪ್ರಸ್ತುತ ಶೇ.1.52 ರಷ್ಟು ಸೋಂಕಿತರು ಮಾತ್ರ ತೀವ್ರ ನಿಗಾ ಘಟಕದಲ್ಲಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡಾ 23,709 ಕ್ಕೆ ಕುಸಿದಿದೆ.
ಈ ಬಗ್ಗೆ ಆರೋಗ್ಯ ಸಚಿವರಾದ ಡಾ.ಸುಧಾಕರ್ ಟ್ವೀಟ್ ಮಾಡಿದ್ದು, ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಸಕ್ರಿಯ ಪ್ರಕರಣಗಳ ಇಳಿಕೆ ಕಂಡಿರುವುದು ಕರ್ನಾಟಕದಲ್ಲಿ. ಅಕ್ಟೋಬರ್ 29 ರಂದು 68,180 ಸಕ್ರಿಯ ಪ್ರಕರಣಳಿದ್ದವು, ನ.29 ರ ವೇಳೆಗೆ ಈ ಸಂಖ್ಯೆ 24,776 ಆಗಿದ್ದು ಶೇ.63.6 ರಷ್ಟು ಇಳಿಕೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 1 ರಂದು ಇದ್ದ ಸಕ್ರಿಯ ಪ್ರಕರಣಗಳಲ್ಲಿ ಶೇ.1.84 ಮಂದಿ ತೀವ್ರ ನಿಗಾ ವಿಭಾಗದಲ್ಲಿದ್ದರು. ಈ ಮೂಲಕ ಕೋವಿಡ್ ಸಾವು, ಹೊಸ ಪ್ರಕರಣಗಳ ಜೊತೆಗೆ ಕೊರೊನಾದಿಂದ ಗಂಭೀರ ಸಮಸ್ಯೆಗೆ ಒಳಗುತ್ತಿರುವವರ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. ಈವರೆಗೆ ಒಟ್ಟು 8.86 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರಲ್ಲಿ 8.50 ಲಕ್ಷ ಜನರು ಗುಣಮುಖರಾಗಿದ್ದಾರೆ. ಒಟ್ಟು 11,792 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರಲ್ಲೂ ಗಣನೀಯ ಇಳಿಕೆ
ನಗರದಲ್ಲಿ ಐದು ತಿಂಗಳ ಬಳಿಕ ಅತ್ಯಂತ ಕಡಿಮೆ ಕೋವಿಡ್ ಪ್ರಕರಣ ದಾಖಲಾಗಿದ್ದು, ನ.30 ರಂದು 444 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಡಿಸೆಂಬರ್ 1 ರಂದು 758 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಜೂನ್ 27 ರಂದು 596 ಪ್ರಕರಣ ಪತ್ತೆಯಾಗಿತ್ತು. ನಂತರದ ದಿನಗಳಲ್ಲಿ ಪ್ರಕರಣದ ಸಂಖ್ಯೆ ಸಾವಿರದ ಗಡಿ ದಾಟಿತ್ತು. ನಂತರ ನ.16 ರಂದು 597 ಜನರಲ್ಲಿ ಸೋಂಕು ಕಾಣಿಸಿಕೊಂಡು, ಬಳಿಕ ಸಾವಿರ ಸಂಖ್ಯೆಯೊಳಗೆಯೇ ಸೋಂಕಿನ ಪ್ರಕರಣ ಕಾಣಿಸಿಕೊಳ್ಳುತ್ತಿದೆ.