ಬೆಂಗಳೂರು:ಭ್ರಷ್ಟಾಚಾರದ ರಾಜಧಾನಿ ಆಗಿಬಿಟ್ಟಿದೆ ಕರ್ನಾಟಕ ರಾಜ್ಯ. ಕಮಿಷನ್ ಆರೋಪದ ಬಗ್ಗೆ ಪ್ರಧಾನಿಯವರಿಗೆ ದೂರು ಕೊಟ್ಟು ಒಂದು ವರ್ಷಕ್ಕಿಂತ ಹೆಚ್ಚಾಯ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರ ಆರೋಪದಲ್ಲಿ ಹುರುಳಿಲ್ಲ ಅಂದರೆ ನೀವು (ರಾಜ್ಯ ಸರ್ಕಾರದವರು) ದೂರು ದಾಖಲಿಸಿಲ್ಲ. ನೀವು ಹಾನೆಸ್ಟ್ ಹಾಗೂ ಬಹಳ ಕ್ಲೀನ್ ಆಗಿದ್ದರೆ ತನಿಖೆಗೆ ವಹಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ತನಿಖೆಗೆ ಮೊದಲೇ ಕ್ಲೀನ್‌ಚಿಟ್: ಬೆಂಗಳೂರು ಮೆಟ್ರೋ ರೈಲು ನಿಗಮದ ಕೇಂದ್ರ ಕಚೇರಿ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಬ್ಬ ಗುತ್ತಿಗೆದಾರ ಸತ್ತಿದ್ದಾಗ ನ್ಯಾಯವೂ ಸಿಕ್ಲಿಲ್ಲ. ತನಿಖೆಗೂ ಮೊದಲೇ ಕೆ.ಎಸ್.ಈಶ್ವರಪ್ಪನವರಿಗೆ ಕ್ಲೀನ್‌ಚಿಟ್ ಕೊಟ್ಟಿದ್ದಾರೆ. ಇದು ಮಹಾ ಅಪರಾಧ. ಕೊಲೆಗೆ ಕಾರಣಕಾರ್ತರಾದವರ ಮೇಲೆ ಭ್ರಷ್ಟಾಚಾರದ ಕೇಸ್ ಕೂಡ ಹಾಕಿಲ್ಲ. ಇಂತಹ ಮುತ್ತು, ರತ್ನಗಳನ್ನೆಲ್ಲ ಮತ್ತೆ ಸಂಪುಟಕ್ಕೆ ತಗೊಳ್ಳಿ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ:ಮುಖ್ಯಮಂತ್ರಿ ಸೇರಿ ಎಲ್ಲರೂ ಭ್ರಷ್ಟರು, ಕಮಿಷನ್ ಬಗ್ಗೆ ಮೋದಿಗೆ ಮತ್ತೊಮ್ಮೆ ಪತ್ರ: ಕೆಂಪಣ್ಣ
ನಾವು ಇಲ್ಲಿಗೇ ಬಿಡುವುದಿಲ್ಲ: ಕಮಿಷನ್ ವಿಚಾರದ ಬಗ್ಗೆ ಪ್ರಧಾನಮಂತ್ರಿ ಹತ್ರ ದೂರು ಹೋದಾಗಲೇ ಈ ಪ್ರಕರಣವನ್ನು ಮುಖ್ಯಮಂತ್ರಿ ಯಾಕೆ ಲೋಕಾಯುಕ್ತ ತನಿಖೆಗಾಗಿ ಶಿಫಾರಸ್ಸು ಮಾಡಲಿಲ್ಲ?. ನ್ಯಾಯಾಂಗ ತನಿಖೆಯನ್ನೂ ಮಾಡಿಲ್ಲ. ಈ ವಿಷಯದಲ್ಲಿ ಭಯ ಇಲ್ಲ ಅಂದ್ರೆ ತನಿಖೆಗೆ ಕೊಡಿ, ನೀವು ಯಾಕೆ ತನಿಖೆಗೆ ಕೊಡುತ್ತಿಲ್ಲ. ಭ್ರಷ್ಟಾಚಾರ ವಿಚಾರವನ್ನು ನಾವು ಇಲ್ಲಿಗೇ ಬಿಡುವುದಿಲ್ಲ ಎಂದು ಎಚ್ಚರಿಸಿದರು.