ಕರ್ನಾಟಕ

karnataka

ETV Bharat / state

ಇಲಾಖೆಗಳ ಅಗತ್ಯದ ಕನಿಷ್ಠ ಶೇ.25 ರಷ್ಟು ವಸ್ತ್ರ ಕೈಮಗ್ಗ ನಿಗಮದಿಂದ ಖರೀದಿ: ಸಿಎಂ ಸೂಚನೆ - Karnataka Handloom Development Corporation Meeting in Bangalore

ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಅಗತ್ಯದ ಕನಿಷ್ಠ ಶೇ.25 ರಷ್ಟು ವಸ್ತ್ರವನ್ನು ಕೈಮಗ್ಗ ನಿಗಮದಿಂದ ಖರೀದಿಸುವಂತೆ ಸುತ್ತೋಲೆ ಹೊರಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಶಿಕ್ಷಣ ಇಲಾಖೆಯ ಸಮವಸ್ತ್ರ ಪೂರೈಕೆಯಲ್ಲಿ ನಿಗಮಕ್ಕೆ ಆಗಿರುವ 10 ಕೋಟಿ ರೂ. ನಷ್ಟದಲ್ಲಿ 5 ಕೋಟಿ ರೂ. ಸರ್ಕಾರ ಭರಿಸಲಿದ್ದು, ಉಳಿದ 5 ಕೋಟಿ ರೂ. ಗಳನ್ನು ನಿಗಮದ ವಹಿವಾಟಿನ ಮೂಲಕ ಭರಿಸುವಂತೆ ಸೂಚನೆ ನೀಡಿದ್ದಾರೆ.

ಸಿಎಂ ಸೂಚನೆ
ಸಿಎಂ ಸೂಚನೆ

By

Published : Aug 24, 2021, 9:20 PM IST

ಬೆಂಗಳೂರು:ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಅಗತ್ಯದ ಕನಿಷ್ಠ ಶೇ.25 ರಷ್ಟು ವಸ್ತ್ರವನ್ನು ಕೈಮಗ್ಗ ನಿಗಮದಿಂದ ಖರೀದಿಸುವಂತೆ ಸುತ್ತೋಲೆ ಹೊರಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಹಣಕಾಸಿನ ಪರಿಸ್ಥಿತಿ ಸುಧಾರಣೆ ಕುರಿತ ಸಭೆ ನಡೆಯಿತು. ನಿಗಮದ ಕುರಿತು ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಸಲಾಯಿತು. ನಿಗಮದ ಕುರಿತು ಸಮಗ್ರ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ, ಕರ್ನಾಟಕ ಕೈಮಗ್ಗ ನಿಗಮದ ಪುನಶ್ಚೇತನಕ್ಕೆ ಕೂಡಲೇ ವಹಿವಾಟು ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ನಿಗಮದ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸುವ ಮೂಲಕ ನಷ್ಟ ಭರಿಸುವಂತೆ ಸಲಹೆ ನೀಡಿದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಹಣಕಾಸಿನ ಪರಿಸ್ಥಿತಿ ಸುಧಾರಣೆ ಕುರಿತ ಸಭೆ

ಶಿಕ್ಷಣ ಇಲಾಖೆಯ ಸಮವಸ್ತ್ರ ಪೂರೈಕೆಯಲ್ಲಿ ನಿಗಮಕ್ಕೆ ಆಗಿರುವ 10 ಕೋಟಿ ರೂ. ನಷ್ಟದಲ್ಲಿ 5 ಕೋಟಿ ರೂ. ಸರ್ಕಾರ ಭರಿಸಲಿದ್ದು, ಉಳಿದ 5 ಕೋಟಿ ರೂ. ಗಳನ್ನು ನಿಗಮದ ವಹಿವಾಟಿನ ಮೂಲಕ ಭರಿಸುವಂತೆ ಸೂಚನೆ ನೀಡಿದ್ದಾರೆ. ಕೈಮಗ್ಗ ನಿಗಮವನ್ನು ಖಾಸಗಿ ಸಹಭಾಗಿತ್ವದೊಂದಿಗೆ ಕೈಮಗ್ಗ ನೇಕಾರರ ಕೌಶಲ್ಯ ವೃದ್ಧಿಗೆ ಒತ್ತು ನೀಡುವ ಮೂಲಕ ಅವರ ಆದಾಯ ಹೆಚ್ಚಿಸುವ ಯೋಜನೆ ರೂಪಿಸಲು ಸಲಹೆ ನೀಡಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ನಿಗಮದ 2 ಎಕರೆ 34 ಗುಂಟೆ ಜಮೀನನ್ನು ಮೈಸೂರು ಮಿನರಲ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿ, ಆದಾಯ ತರುವಂತೆ ಮಾಡಬೇಕು. ನಗರ ಪ್ರದೇಶದ ಗ್ರಾಹಕರನ್ನು ಆಕರ್ಷಿಸಲು ವಿನ್ಯಾಸ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಾರುಕಟ್ಟೆ ಅವಕಾಶ ವಿಸ್ತರಿಸಬೇಕು ಎಂದು ಸಲಹೆ ನೀಡಿದ್ದಾರೆ.

ರಾಜ್ಯದ ಕೈಮಗ್ಗ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಮತ್ತು ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಆನ್​ಲೈನ್ ಮಾರಾಟ ವ್ಯವಸ್ಥೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಭೆಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್. ಪ್ರಸಾದ್, ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕೆ (ಎಂ.ಎಸ್.ಎಂ.ಇ) ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಓದಿ:ಮೈಸೂರು ಮೇಯರ್ ಚುನಾವಣೆ.. ಜೆಡಿಎಸ್ ಜತೆ ಮೈತ್ರಿಗೆ ಕಾಂಗ್ರೆಸ್ ವರಿಷ್ಠರ ಸೂಚನೆ : ಶಾಸಕ ತನ್ವೀರ್ ಸೇಠ್

ABOUT THE AUTHOR

...view details