ಬೆಂಗಳೂರು:ಕಾಂಗ್ರೆಸ್ ಸರ್ಕಾರ ತನ್ನ ಎಲ್ಲ ಸಚಿವರಿಗೆ ಹೊಸ ಇನ್ನೊವಾ ಕ್ರಸ್ಟಾ ಕಾರು ಖರೀದಿಸಲು ಮುಂದಾಗಿದೆ. 33 ಹೊಸ ಇನ್ನೊವಾ ಕ್ರಸ್ಟಾ ಹೈ ಎಂಡ್ ಕಾರನ್ನು ಖರೀದಿಸಲು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದು, ಇದಕ್ಕಾಗಿ ಸುಮಾರು 9.9 ಕೋಟಿ ರೂ. ಅನುದಾನ ನೀಡಲಾಗಿದೆ. ಟೆಂಡರ್ ಕರೆಯದೇ ನೇರವಾಗಿ 33 ಸಚಿವರಿಗೆ ಹೊಸ ಕಾರು ಖರೀದಿ ಮಾಡಲು ಕೆಟಿಪಿಪಿ ಕಾಯ್ದೆಯಡಿ 4ಜಿ ವಿನಾಯಿತಿ ನೀಡಲಾಗಿದೆ. ಒಂದು ಇನ್ನೊವಾ ಹೈಬ್ರಿಡ್ ಎಸ್ ಯುವಿ ಕಾರಿಗೆ ಸುಮಾರು 30 ಲಕ್ಷ ರೂ. ವೆಚ್ಚವಾಗಲಿದೆ.
ಹಳೆ ಕಾರುಗಳ ಗರಿಷ್ಠ ಮಿತಿಯಾದ 1 ಲಕ್ಷ ಕಿಮೀಗೂ ಅಧಿಕ ದೂರ ಕ್ರಮಿಸಿರುವುದರಿಂದ ನಿಯಮದ ಪ್ರಕಾರ ಹೊಸ ಕಾರು ಖರೀದಿಸಬೇಕಾಗಿದೆ. ನಿಯಮದಂತೆ 1 ಲಕ್ಷ ಕಿಮೀ ಓಡಾಟ ಅಥವಾ 3 ವರ್ಷ ಬಳಕೆಯಲ್ಲಿ ಯಾವುದು ಮೊದಲು ಅದರನ್ವಯ ಹೊಸ ಕಾರು ಖರೀದಿಸಬೇಕು. ಸಚಿವರ ಸುರಕ್ಷತೆಯ ದೃಷ್ಟಿಯಿಂದ ಹೊಸ ಕಾರು ಖರೀದಿ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಸಚಿವರ ಕಾರುಗಳನ್ನು 2020ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಖರೀದಿಸಲಾಗಿತ್ತು. ಬಳಿಕ ಹೊಸ ಕಾರನ್ನು ಖರೀದಿಸಿಲ್ಲ. ಕೆಲ ಕಾರುಗಳು 2 ಲಕ್ಷ ಕಿಮೀ ಮೀರಿ ಓಡಾಡಿವೆ. ಹೀಗಾಗಿ ಹೊಸ ಕಾರನ್ನು ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯರಿಗೆ ಹೊಸ ಕಾರನ್ನು ಖರೀದಿಸಲಾಗಿದೆ.