ಬೆಂಗಳೂರು: ನೂತನವಾಗಿ ರಚಿಸಲಾಗಿರುವ 50 ತಾಲೂಕುಗಳ ಪೈಕಿ ಎಂಟು ತಾಲೂಕುಗಳಲ್ಲಿ ಹೊಸದಾಗಿ ಉಪ ನೋಂದಣಾಧಿಕಾರಿ ಕಚೇರಿ (ಸಬ್ ರಿಜಿಸ್ಟ್ರಾರ್ ಆಫೀಸ್) ಪ್ರಾರಂಭಿಸಲು ಅನುಮತಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ, ಕೊಪ್ಪಳದ ಕುಕನೂರು, ಕನಕಗಿರಿ, ರಾಯಚೂರಿನ ಸಿರಿವಾರ, ಉಡುಪಿಯ ಕಾಪು, ವಿಜಯಪುರದ ಬಬಲೇಶ್ವರ, ತಿಕೋಟಾ ಮತ್ತು ತಾಳಿಕೋಟೆ ತಾಲೂಕಿನಲ್ಲಿ ಹೊಸದಾಗಿ ಉಪನೋಂದಣಾಧಿಕಾರಿ ಕಚೇರಿ ಪ್ರಾರಂಭವಾಗಲಿದೆ. ಪ್ರತಿ ಕಚೇರಿಗೆ ತಲಾ ನಾಲ್ಕು ಹುದ್ದೆಗಳಂತೆ ಒಟ್ಟು 32 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಉಪ ನೋಂದಣಾಧಿಕಾರಿ 1, ಪ್ರಥಮ ದರ್ಜೆ ಸಹಾಯಕ 1, ಡಾಟಾ ಎಂಟ್ರಿ ಆಪರೇಟರ್ 1 ಮತ್ತು ಡಿ ಗ್ರೂಪ್ 1 ಹುದ್ದೆಗಳು ಇರಲಿವೆ.
ದೂರದ ತಾಲೂಕು ಕೇಂದ್ರಗಳಿಗೆ ಕೆಲಸ ಕಾರ್ಯಗಳಿಗಾಗಿ ಹೋಗಿ ಬರಲು ಸಮಸ್ಯೆ ಎದುರಿಸುತ್ತಿದ್ದ ಜನರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಒತ್ತಡ, ಹೋರಾಟದಿಂದಾಗಿಯೇ ಹೆಚ್ಚಿನ ಹೊಸ ತಾಲೂಕುಗಳು ರಚನೆಯಾಗಿದ್ದವು. ಆದರೆ 2017ರಿಂದ ಇತ್ತೀಚಿನವರೆಗೆ ರಾಜ್ಯ ಸರ್ಕಾರ ಬೆಳಗಾವಿ, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ ಹಾವೇರಿ, ಬಳ್ಳಾರಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಗದಗ, ದಕ್ಷಿಣ ಕನ್ನಡ, ದಾವಣಗೆರೆ, ಮೈಸೂರು, ಉಡುಪಿ, ರಾಯಚೂರು, ರಾಮನಗರ, ಚಿಕ್ಕಬಳ್ಳಾಪುರ, ಉತ್ತರಕನ್ನಡ ಜಿಲ್ಲೆಗಳಲ್ಲಿ ರಚಿಸಿರುವ 58 ಹೊಸ ತಾಲೂಕುಗಳ ಪೈಕಿ ಬಹುತೇಕ ತಾಲೂಕುಗಳು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದವು. ಇವುಗಳಲ್ಲಿ ಕೆಲವು 2017ರಲ್ಲಿ, ಇನ್ನೊಂದಷ್ಟು 2019ರಲ್ಲಿ ಹಾಗೂ ಕೆಲವು ನಗರಗಳನ್ನು 2022ರಲ್ಲಿ ತಾಲೂಕುಗಳಾಗಿ ಘೋಷಣೆ ಮಾಡಲಾಗಿತ್ತು.
ಸರ್ಕಾರ ಕೆಲವು ಹೊಸ ತಾಲೂಕುಗಳನ್ನು ರಚಿಸಿ ಐದು ವರ್ಷಗಳಾಗಿವೆ. ಆದರೂ ಸಿಬ್ಬಂದಿ ನೇಮಕ ಹಾಗೂ ಸಾಕಷ್ಟು ಅನುದಾನ ಮಂಜೂರಾಗಿಲ್ಲ. ಕೆಲವು ತಾಲೂಕುಗಳಿಗೆ ಇನ್ನೂ ಆಡಳಿತ ಸೌಧಗಳೇ (ಮಿನಿವಿಧಾನಸೌಧ) ನಿರ್ಮಾಣವಾಗಿಲ್ಲ. ಅವುಗಳಲ್ಲಿ ಕಿತ್ತೂರು, ಹನೂರು ತಾಲೂಕುಗಳೂ ಸೇರಿವೆ. ಆಡಳಿತವನ್ನು ಜನರಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಈ ಹಿಂದೆ ಇದ್ದ 10 ತಾಲೂಕುಗಳನ್ನು 15ಕ್ಕೆ ಹೆಚ್ಚಿಸಿದೆ. ಹೊಸ ತಾಲೂಕುಗಳಾದ ಕಿತ್ತೂರು, ಕಾಗವಾಡ, ನಿಪ್ಪಾಣಿ, ಮೂಡಲಗಿ ಮತ್ತು ಯರಗಟ್ಟ ಸೇರಿವೆ. ನಿಯಮದಂತೆ ಪ್ರತಿ ತಾಲೂಕಿಗೆ ವಿವಿಧ ಇಲಾಖೆಗಳ ಕನಿಷ್ಠ 18 ಕಚೇರಿಗಳಿರಬೇಕು. ಆದರೆ ಈ ಹೊಸ ಐದು ತಾಲೂಕುಗಳಲ್ಲಿ ಕಚೇರಿಗಳಲ್ಲಿ ಸರಿಯಾದ ರೀತಿಯಲ್ಲಿ ಎಲ್ಲ ಕಚೇರಿಗಳಿಲ್ಲ. ಒಂದಿದ್ದರೆ ಇನ್ನೊಂದಿಲ್ಲ ಎನ್ನುವ ಪರಿಸ್ಥಿತಿ ಇದೆ.