ಬೆಂಗಳೂರು: ಸಾರ್ವಜನಿಕ ವಲಯದಿಂದ ಭಾರಿ ವಿರೋಧ ಕಂಡುಬಂದ ಕಾರಣ ಮದ್ಯ ಖರೀದಿ ವಯೋಮಿತಿ ಸಡಿಲಿಕೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಮದ್ಯ ಕೊಂಡುಕೊಳ್ಳಲು ಇದ್ದ 21 ವರ್ಷದ ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಇಳಿಸುವ ಕರ್ನಾಟಕ ಅಬಕಾರಿ (ಪರವಾನಿಗೆಯ ಸಾಮಾನ್ಯ ಷರತ್ತು-ತಿದ್ದುಪಡಿ) ನಿಯಮ 2023ರ ಕರಡು ಅಧಿಸೂಚನೆಯನ್ನು ಹಿಂಪಡೆಯಲಾಗಿದೆ. ಈ ಸಂಬಂಧ ಅಬಕಾರಿ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಅಬಕಾರಿ ಅಧಿನಿಯಮ, 1965 ರ ಕಲಂ 36 (1) (ಜಿ) ಮತ್ತು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರ ನಿಯಮ 10 (1) (ಇ) ರಲ್ಲಿ ವಯಸ್ಸಿಗೆ ಸಂಬಂಧಿಸಿದಂತೆ ನಿರ್ದಿಷ್ಟಪಡಿಸಲಾಗಿರುವ ಅಂಶಗಳಲ್ಲಿ ಇರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ವಿವಿಧ ಕಾರ್ಯಕ್ಷಮತೆಗಳ ಬಗ್ಗೆ ಪರಿಶೀಲಿಸಲು ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965 ಮತ್ತು ಅದರಡಿ ರಚಿಸಲಾಗಿರುವ ನಿಯಮಗಳಲ್ಲಿರುವ ಅನಗತ್ಯ ಅಂಶಗಳನ್ನು ಗುರುತಿಸಿ, ಕೈಬಿಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಉನ್ನತ ಮಟ್ಟದ ಸಮಿತಿಯ ಶಿಫಾರಸಿನಂತೆ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967 ರ ನಿಯಮ 10 (1) (ಇ)ಗೆ ತಿದ್ದುಪಡಿ ತಂದು ಈ ಹಿಂದೆ ಇದ್ದ ಇಪ್ಪತ್ತೊಂದು ವರ್ಷದ ವಯೋಮಿತಿಯನ್ನು 18 ವರ್ಷಕ್ಕೆ ಸಡಿಲಿಸುವ ಸಂಬಂಧ ಜ.9 ರಂದು ಕರಡು ಅಧಿಸೂಚನೆ ಪ್ರಕಟಿಸಲಾಗಿತ್ತು.
ಕರಡು ನಿಯಮಗಳ ಬಗ್ಗೆ ಆಕ್ಷೇಪಣೆ/ಸಲಹೆಗಳನ್ನು ಪರಿಗಣಿಸಲು 30 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ, ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಪ್ರಸ್ತಾಪಿಸಿರುವುದಕ್ಕೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಮಾಧ್ಯಮಗಳಲ್ಲಿ ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸಿ, ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರ ನಿಯಮ 10 (1) (ಇ) ರಲ್ಲಿ 'ಇಪ್ಪತ್ತೊಂದು ವರ್ಷಗಳು' ಎಂಬ ಪದಗಳ ಬದಲಾಗಿ 'ಹದಿನೆಂಟು ವರ್ಷಗಳು' ಎಂದು ಬದಲಾವಣೆ ಮಾಡಲು ಉದ್ದೇಶಿಸಿರುವ ಕರಡು ತಿದ್ದುಪಡಿ ನಿಯಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಅಬಕಾರಿ ಆಯುಕ್ತರು ತಿಳಿಸಿದ್ದಾರೆ.