ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪಕ್ಷದಲ್ಲಿ ಆಂತರಿಕ ಕಲಹ, ಅಸಮಾಧಾನಿತರ ಆಕ್ರೋಶ ಹೊಗೆಯಾಡುತ್ತಲೇ ಬಂದಿದೆ. ಗುಂಪುಗಾರಿಕೆ, ಮೂಲ, ವಲಸಿಗರ ತಿಕ್ಕಾಟ ನಡೆದುಕೊಂಡೇ ಬಂದಿದೆ. ಮೂರು ಬಾರಿ ಸಂಪುಟ ವಿಸ್ತರಣೆ ನಡೆದರೂ ಅತೃಪ್ತಿ ಮಾತ್ರ ತಣ್ಣಗಾಗಿಲ್ಲ.
2019 ರ ಜೂನ್ 26 ರಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನದಿಂದಲೂ ಪಕ್ಷದಲ್ಲಿ ಅತೃಪ್ತಿಯ ಹೊಗೆಯಾಡುತ್ತಲೇ ಬಂದಿದೆ. ಮೂರು ಜನರಿಗೆ ಡಿಸಿಎಂ ಸ್ಥಾನ ನೀಡಿದ್ದು ಮತ್ತು ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದು, ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಮತ್ತಿತರ ನಾಯಕರ ಆಕ್ರೋಶ ವ್ಯಕ್ತವಾಗಿತ್ತು.
ನಂತರ 2020ರ ಜನವರಿಯಲ್ಲಿ ಎರಡನೇ ಬಾರಿ ಸಂಪುಟ ವಿಸ್ತರಣೆ ಮಾಡಿ ವಲಸೆ 10 ಜನರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ನೀಡಲಾಗಿತ್ತು. ಮೂಲ ಬಿಜೆಪಿಯ ಯಾರನ್ನೂ ಎರಡನೇ ಸಂಪುಟ ವಿಸ್ತರಣೆಯಲ್ಲಿ ಪರಿಗಣಿಸಿರಲಿಲ್ಲ. ಇದು ಮೂಲ ಬಿಜೆಪಿಗರು ವಿಶೇಷವಾಗಿ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಹಲವರ ಕಣ್ಣು ಕೆಂಪಾಗಿಸಿತ್ತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವದ ವಿರುದ್ಧವೇ ಆಯ್ದ 10-20 ಶಾಸಕರು ಪದೇ ಪದೇ ಅತೃಪ್ತಿ ಹೊರಹಾಕುತ್ತಲೇ ಬಂದಿದ್ದಾರೆ. ಆಗಾಗ ಪ್ರತ್ಯೇಕ ಸಭೆ ನಡೆಸಿ ಹೈಕಮಾಂಡ್ ವರೆಗೂ ಸಂದೇಶ ತಲುಪಿಸುವ ಕೆಲಸ ಮಾಡಿದ್ದಾರೆ.
ಆರಂಭದಲ್ಲಿ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಶಾಸಕರ ಸಭೆ ನಡೆಸಿ, 20 ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು. ಬಸನಗೌಡ ಪಾಟೀಲ್ ಯತ್ನಾಳ್, ರಾಜೂಗೌಡ, ಸಿ.ಪಿ ಯೋಗೀಶ್ವರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಶಿವನಗೌಡ ನಾಯಕ್, ರುದ್ರಪ್ಪ ಲಮಾಣಿ, ಆಪರೇಷನ್ ಕಮಲದಲ್ಲಿ ಸಕ್ರಿಯವಾಗಿದ್ದ ಸಿಎಂ ಆಪ್ತ ಸಂತೋಷ್ ಕೂಡ ಭಾಗಿಯಾಗಿ ಗಮನ ಸೆಳೆದಿದ್ದರು. ವಿಷಯ ಹೈಕಮಾಂಡ್ ತಲುಪುತ್ತಿದ್ದಂತೆ ಸಿಎಂ ನಿವಾಸಕ್ಕೆ ದೌಡಾಯಿಸಿದ್ದ ಶೆಟ್ಟರ್ ಸಭೆ ನಡೆಸಿಲ್ಲ, ಭೋಜನ ಮಾತ್ರ ನಡೆಸಿದ್ದೇವೆ ಎಂದು ಸಮಜಾಯಿಷಿ ನೀಡಿದ್ದರು.
ನಂತರ ಲಾಕ್ ಡೌನ್ ಸಮಯದಲ್ಲೇ ಅತೃಪ್ತರ ಸಭೆ ನಡೆದಿತ್ತು, ಶಾಸಕರಾಗಿದ್ದ ಉಮೇಶ್ ಕತ್ತಿ ಅಪಾರ್ಟ್ ಮೆಂಟ್ ನಲ್ಲಿ ಸಭೆ ನಡೆದಿತ್ತು. ಮುರುಗೇಶ್ ನಿರಾಣಿ, ರಾಮದಾಸ್, ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದು ಸವದಿ ಸೇರಿ 10ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು. ಇದು ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿತ್ತು.
ನಂತರ ಶಾಸಕರ ಭವನದಲ್ಲಿ ಮತ್ತೊಮ್ಮೆ ಸಭೆ ನಡೆಸಲಾಯಿತು. ಸತತವಾಗಿ ಎರಡು ದಿನ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ರಾಜೂಗೌಡ, ನಿರಾಣಿ, ರಾಜಕುಮಾರ್ ಪಾಟೀಲ್ ತೆಲ್ಕೂರ, ಹಾಲಪ್ಪ ಆಚಾರ್, ಶಿವನಗೌಡ ಪಾಟೀಲ್, ಗಂಗಾವತಿ ಪರಣ್ಣ ಮುನವಳ್ಳಿ, ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮೂಡ, ಆನಂದ ಮಾಮನಿ ಸೇರಿದಂತೆ ಹಲವು ಶಾಸಕರು ಸಭೆ ನಡೆಸಿ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮೂಲ ಬಿಜೆಪಿಗರ ಕಡೆಗಣಿಸಿ ವಲಸಿಗರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂದು ಕಿಡಿಕಾರಿದ್ದರು.
ಇದಾದ ನಂತರ ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ಕಟೀಲ್ ಅತೃಪ್ತರೊಂದಿಗೆ ಮಾತುಕತೆ ನಡೆಸಿದ್ದರು. ಸಂಪುಟ ವಿಸ್ತರಣೆ ವೇಳೆ ಅವಕಾಶ ಕಲ್ಪಿಸುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಅತೃಪ್ತರಿಗೆ ನಿಗಮ-ಮಂಡಳಿ ಗಿಫ್ಟ್:
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಲವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅಸಮಾಧಾನ ಶಮನ, ಭಿನ್ನಮತಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುವಲ್ಲಿ ಬಹುತೇಕ ಸಿಎಂ ಸಫಲರಾಗಿದ್ದಾರೆ. ರಾಜೂಗೌಡ, ಶಿವನಗೌಡ ನಾಯಕ್, ಸಿದ್ದು ಸವದಿ, ಪರಣ್ಣ ಮುನವಳ್ಳಿ, ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಬಂಡಾಯ ಶಮನ ಮಾಡುವಲ್ಲಿ ಬಿಎಸ್ವೈ ಸಫಲರಾಗಿದ್ದಾರೆ.
ಸಂಪುಟ ವಿಸ್ತರಣೆ ಎನ್ನುವ ಜೇನುಗೂಡಿಗೆ ಕೈಹಾಕುವ ಮುನ್ನ ಅಸಮಾಧಾನಿತರ ಸಂಖ್ಯೆಯನ್ನು ನಿಗಮ ಮಂಡಳಿ ಮೂಲಕ ತಗ್ಗಿಸಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಬಹಳ ಎಚ್ಚರಿಕೆಯಿಂದ ಮೂರನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಇಬ್ಬರು ವಲಸಿಗರು, ಐವರು ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಹೊಸದಾಗಿ ಅವಕಾಶ ನೀಡಿದ್ದಾರೆ.
ಅಸಮಾಧಾನಿತರ ತಂಡದ ಪ್ರಮುಖ ನಾಯಕರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಸಿ.ಪಿ ಯೋಗೇಶ್ವರ್ಗೆ ಅವಕಾಶ ಕಲ್ಪಿಸುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಏಕಾಂಗಿಯಾಗಿಸಲಾಗಿದೆ. ಹಾಗಾಗಿ ಈ ಹಿಂದೆ ನಡೆದ ರೀತಿಯ ಅಸಮಾಧಾನಿತರ ಸಭೆ ಈಗ ನಡೆಯುವುದು ಅನುಮಾನವಾಗಿದೆ.