ಬೆಂಗಳೂರು:ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ರಾಜ್ಯ ಸರ್ಕಾರ ಅನ್ಲಾಕ್ 4.Oರ ಮಾರ್ಗಸೂಚಿ ಹೊರಡಿಸಿದೆ. ಕಂಟೇನ್ಮೆಂಟ್ ವಲಯ ಹೊರತುಪಡಿಸಿ ಎಲ್ಲಾ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ತೆರವು 4 ರ ಅವಧಿಯಲ್ಲಿ ಶಾಲೆಗಳು, ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು ಮುಚ್ಚಿರಲಿವೆ. ಸೆ.20 ರಿಂದ ಜಾರಿಗೆ ಬರುವಂತೆ ಕಂಟೇನ್ಮೆಂಟ್ ವಲಯಗಳ ಹೊರಗಿನ ಪುದೇಶಗಳಲ್ಲಿ ಮಾತ್ರ ಆನ್‌ಲೈನ್ ಬೋಧನೆ/ಟೆಲಿ ಸಮಾಲೋಚನೆ ಹಾಗೂ ತತ್ಸಂಬಂಧಿತ ಕಾರ್ಯಕ್ಕೆ ಶಾಲೆಗಳಿಗೆ ಶೇ.50 ರ ವರೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಕರೆಯಲು ಅನುಮತಿಸಬಹುದಾಗಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಮಾದರಿ ಕಾರ್ಯವಿಧಾನವನ್ನು (ಎಸ್‌ಓಪಿ) ಹೊರಡಿಸಲಿದೆ.
9 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ ಕಂಟೇನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಮಾತ್ರ ಸ್ವಇಚ್ಛೆಯ ಆಧಾರದ ಮೇಲೆ ತಮ್ಮ ಶಾಲೆಗಳಿಗೆ ಭೇಟಿ ನೀಡಲು ಅನುಮತಿಸಬಹುದಾಗಿದೆ. ಇದು ಅವರ ತಂದೆ-ತಾಯಿಗಳ ಮತ್ತು ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ ಮತ್ತು ಇದಕ್ಕೆ ಸೆ.21, 2020 ರಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗುವುದು. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಮಾದರಿ ಕಾರ್ಯವಿಧಾನವನ್ನು (ಎಸ್‌ಓಪಿ) ಹೊರಡಿಸಲಿದೆ.