ಬೆಂಗಳೂರು:ಆದಾಯ ಸಂಗ್ರಹ ಕ್ಷೀಣಿಸುತ್ತುರುವ ಹಿನ್ನೆಲೆ ಕೇಂದ್ರ ಸರ್ಕಾರ ರಾಜ್ಯಗಳ ಸಾಲದ ಮಿತಿಯನ್ನು ಏರಿಕೆ ಮಾಡಿದೆ. ಅದರಂತೆ ರಾಜ್ಯ ಸರ್ಕಾರವೂ ಹೆಚ್ಚಿನ ಸಾಲ ಮಾಡುವ ಇರಾದೆಯಲ್ಲಿತ್ತು. ಆದರೆ ಸಾಲ ಮಾಡಲು ಕೇಂದ್ರ ವಿಧಿಸಿರುವ ಷರತ್ತುಗಳೇ ಇದೀಗ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಲಾಕ್ಡೌನ್ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಮನಗಂಡು ಕೇಂದ್ರ ಸರ್ಕಾರ ಸಾಲದ ಮಿತಿಯನ್ನು ಶೇ 3 ರಿಂದ ಶೇ 5ಕ್ಕೆ ಏರಿಕೆ ಮಾಡಿತ್ತು. ಅದರಂತೆ ಕರ್ನಾಟಕ ತನ್ನ ಶೇ 3ರ ಮಿತಿಯಲ್ಲಿ ಸುಮಾರು 50,000 ಕೋಟಿ ರೂ. ಸಾಲವನ್ನು ಮಾರುಕಟ್ಟೆಯಿಂದ ಎತ್ತಬಹುದಾಗಿದೆ. ಇದೀಗ ಹೆಚ್ಚುವರಿಯಾಗಿ 15,000 ಕೋಟಿ ರೂ. ಸಾಲ ಮಾಡಬಹುದಾಗಿದೆ. ಕೇಂದ್ರ ಸರ್ಕಾರ ಸಾಲದ ಮಿತಿಯನ್ನೇನೋ ವಿಸ್ತರಿಸಿದೆ ಆದರೆ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಂತೆ ಈ ಸಾಲದ ಮಿತಿಯನ್ನು ಏರಿಕೆ ಮಾಡಲಾಗಿದೆ. ಹೆಚ್ಚುವರಿ ಸಾಲ ಪಡೆಯಬೇಕಾದರೆ ರಾಜ್ಯಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಕೆಲ ಕಠಿಣ ಷರತ್ತು ವಿಧಿಸಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹೆಚ್ಚುವರಿ ಸಾಲ ಮಾಡಲು ಷರತ್ತುಗಳೇನು?
ಕೇಂದ್ರ ಸರ್ಕಾರ ರಾಜ್ಯದ ಸಾಲದ ಮಿತಿಯನ್ನು ಶೇ3ರ ರಿಂದ ಶೇ5ಕ್ಕೆ ಏರಿಕೆ ಏನೋ ಮಾಡಿದೆ. ಅದರಂತೆ ರಾಜ್ಯ ಶೇ 3.5ರ ವರೆಗಿನ ಸಾಲವನ್ನು ಷರತ್ತುಗಳಿಲ್ಲದೇ ಸುಲಭವಾಗಿ ಮಾಡಬಹುದಾಗಿದೆ. ಆದರೆ ನಂತರದ ಶೇ 3.5ರಿಂದ ಶೇ 5ರಷ್ಟು ಸಾಲ ಮಾಡಬೇಕಾದರೆ ಕಠಿಣ ಷರತ್ತನ್ನು ವಿಧಿಸಲಾಗಿದೆ. ಅದರಂತೆ 3.5% ರಿಂದ 4.5% ವರೆಗಿನ 1% ಸಾಲವನ್ನು ಮಾರುಕಟ್ಟೆಯಿಂದ ಎತ್ತುವಳಿ ಮಾಡಬೇಕಾದರೆ ರಾಜ್ಯ ಕೆಲ ಕಠಿಣ ಷರತ್ತನ್ನು ಪಾಲಿಸಬೇಕು.
ಶೇ.1ರಷ್ಟರ ಸಾಲ 0.25% ರಂತೆ ನಾಲ್ಕು ಹಂತಗಳಲ್ಲಿ ಲಭ್ಯವಾಗಲಿದೆ. ಈ ಪ್ರತಿ ನಾಲ್ಕು ಹಂತಗಳ ಸಾಲ ಲಭಿಸಬೇಕಾದರೆ ನಿಗದಿತ, ಕಾರ್ಯಸಾಧು ಸುಧಾರಣೆಯನ್ನು ಮಾಡಬೇಕಾಗಿದೆ. ಕೊನೆಯ 0.5% ಸಾಲ ಪಡೆಯಬೇಕಾದರೆ ನಾಲ್ಕು ಸುಧಾರಣೆ ಷರತ್ತುಗಳ ಪೈಕಿ ಮೂರನ್ನು ಸಂಪೂರ್ಣವಾಗಿ ಸಾಧಿಸಿರಬೇಕು. ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್, ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್, ವಿದ್ಯುತ್ ಶಕ್ತಿ ವಿತರಣೆ, ನಗರ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ಧಿ ಈ ನಾಲ್ಕು ಕ್ಷೇತ್ರಗಳಲ್ಲಿ ಸುಧಾರಣೆ ತರುವ ಷರತ್ತುಗಳನ್ನು ಪಾಲಿಸಿದರೆ ಮಾತ್ರ ಸಾಲ ಲಭ್ಯವಾಗಲಿದೆ.