ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಾರಿ ಪಂಚ ಗ್ಯಾರಂಟಿ ಹೊರೆ ಮತ್ತು ಬರದ ಬರೆಯ ಮಧ್ಯೆ ಹಣಕಾಸು ನಿರ್ವಹಣೆ ಮಾಡಬೇಕಾಗಿದೆ. ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟದ ಕಾರಣ ಬಜೆಟ್ನಲ್ಲಿ ಅಂದಾಜಿಸಿದಂತೆ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಪಂಚ ಗ್ಯಾರಂಟಿ ಕೇಂದ್ರೀಕೃತ ಆಡಳಿತಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಇದಕ್ಕಾಗಿ 2023-24 ಸಾಲಿನಲ್ಲಿ ಸುಮಾರು 40,000 ಕೋಟಿ ರೂ. ವೆಚ್ಚವಾಗಲಿದ್ದು, ಗರಿಷ್ಠ ಆದಾಯ ಸಂಗ್ರಹಕ್ಕೆ ಒತ್ತು ನೀಡಿದೆ. ಇದರ ಮಧ್ಯೆ 223 ತಾಲೂಕುಗಳಲ್ಲಿ ತೀವ್ರ ಬರ ಉಂಟಾಗಿರುವುದು ಸರ್ಕಾರದ ಹಣಕಾಸು ನಿರ್ವಹಣೆಯ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗದೇ ಇರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೇ ಡಿಸೆಂಬರ್ನಲ್ಲಿ ಮೊದಲ ವಾರದಲ್ಲಿ ಮುಖ್ಯಮಂತ್ರಿ ಎಲ್ಲ ತೆರಿಗೆ ಸಂಗ್ರಹದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಆದಾಯ ಸಂಗ್ರಹ ಹೆಚ್ಚಿಸುವಂತೆ ತಾಕೀತು ಮಾಡಿದ್ದಾರೆ.
2023-24ರ ಸಾಲಿಗೆ ಸರ್ಕಾರ 1.82 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಿದೆ. ವಾಣಿಜ್ಯ ತೆರಿಗೆ - 98,650 ಕೋಟಿ ರೂ., ಅಬಕಾರಿ - 36,000 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ - 25,000 ಕೋಟಿ ರೂ., ಸಾರಿಗೆ - 11,500 ಕೋಟಿ ರೂ. ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯಿಂದ 9,000 ಕೋಟಿ ರೂ. ತೆರಿಗೆ ಸಂಗ್ರಹದ ನಿರೀಕ್ಷೆ ಹೊಂದಿದೆ. ಆದರೆ, ಈವರೆಗೆ ಒಟ್ಟು 1.10 ಲಕ್ಷ ಕೋಟಿ ಮಾತ್ರ ಸಂಗ್ರಹಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೇವಲ 12,000 ಕೋಟಿ ಮಾತ್ರ ಹೆಚ್ಚು ಆದಾಯ ಬಂದಿದೆ. ಬರದ ಹಿನ್ನೆಲೆ ಪ್ರಮುಖ ತೆರಿಗೆಗಳು ನಿಗದಿತ ಗುರಿ ಮುಟ್ಟುವಲ್ಲಿ ವಿಫಲವಾಗಿದೆ ಎನ್ನುತ್ತಾರೆ ಆರ್ಥಿಕ ಇಲಾಖೆ ಅಧಿಕಾರಿಗಳು.
ಮುಕ್ತ ಮಾರುಕಟ್ಟೆ ಮೂಲಕ ಸಾಲ ಶುರು:ಸರ್ಕಾರ ಪಂಚ ಗ್ಯಾರಂಟಿ ಹಾಗೂ ಬರ ನಿರ್ವಹಣೆಗಾಗಿ ಹೆಚ್ಚಿನ ಹಣ ಹೊಂದಿಸುವ ಅನಿವಾರ್ಯತೆಕ್ಕೊಳಗಾಗಿದೆ. ಹೀಗಾಗಿ ಗರಿಷ್ಠ ಆದಾಯ ಸಂಗ್ರಹದ ಜೊತೆಗೆ ಅಧಿಕ ಸಾಲದ ಮೊರೆ ಹೋಗುವುದು ಪರಿಸ್ಥಿತಿ ಉದ್ಭವಿಸಿದೆ. ಜುಲೈನಲ್ಲಿ ಮಂಡಿಸಿದ ಬಜೆಟ್ನಲ್ಲಿ 2023-24 ಸಾಲಿನಲ್ಲಿ ಒಟ್ಟು ಅಂದಾಜು 85,818 ಕೋಟಿ ಸಾಲ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದಿಂದ 6,254 ಕೋಟಿ ರೂ. ಸಾಲ ಮಾಡಲು ಅಂದಾಜಿದೆ. ಬಹಿರಂಗ ಮಾರುಕಟ್ಟೆ ಮೂಲಕ 78,363 ಕೋಟಿ ರೂ. ಸಾಲ ಎತ್ತುವಳಿ ಮಾಡುವುದಾಗಿ ಬಜೆಟ್ನಲ್ಲಿ ತಿಳಿಸಲಾಗಿದೆ.