ಬೆಂಗಳೂರು:ರಾಜ್ಯದಲ್ಲಿ 900 ಹೊಸ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಹಾಲಿ ಇರುವ 463 ಎಂಎಸ್ಐಎಲ್ ಮಳಿಗೆಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ಗ್ರಾಮ ಪಂಚಾಯತಿಯಿಂದ ಮತ್ತೊಂದು ಗ್ರಾಮ ಪಂಚಾಯತಿಗೆ ಸ್ಥಳಾಂತರಿಸಲು ಅವಕಾಶ ನೀಡಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದಿದೆ.
ಹೊಸದಾಗಿ 900 ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ಮೇ ತಿಂಗಳಲ್ಲಿ ಕರ್ನಾಟಕ ಅಬಕಾರಿ ನಿಯಮ-2020ಕ್ಕೆ ತಿದ್ದುಪಡಿ ತರಲು ಆದೇಶ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿರುವ ರಾಜ್ಯ ಹಣಕಾಸು (ಅಬಕಾರಿ) ಇಲಾಖೆ, ಮುಂದಿನ ಗೆಜೆಟ್ ಅಧಿಸೂಚನೆ ಪ್ರಕಟವಾಗುವ ಆದೇಶ ಹಿಂಪಡೆದುಕೊಂಡಿತ್ತು. 1967ರ ಕರ್ನಾಟಕ ಅಬಕಾರಿ ನಿಯಮಗಳ ಕಾಯ್ದೆಗೆ ತಿದ್ದುಪಡಿ ತಂದು, ನಿಯಮ 23ಕ್ಕೆ ಎರಡು ಹೊಸ ನಿಯಮಗಳನ್ನು ಸೇರ್ಪಡೆ ಮಾಡಿದೆ.
2016ರಲ್ಲಿ ಕಾಂಗ್ರೆಸ್ ಸರ್ಕಾರ 900 ಹೊಸ ಎಂಎಸ್ಐಎಲ್ನ ಸಿಎಲ್-11 (ಸಿ) (ಸರ್ಕಾರಿ ಮದ್ಯ ಮಾರಾಟ ಮಳಿಗೆ) ತೆರೆಯಲು ಹೊರಡಿಸಿದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಹಿಂದಿನ ಸರ್ಕಾರ ಪ್ರಸ್ತಾವನೆ ಕೈ ಬಿಟ್ಟಿತ್ತು. ಇದೀಗ ರಾಜ್ಯ ಸರ್ಕಾರ ಕೊರೊನಾ ಸಂಕಷ್ಟದಿಂದಾಗಿ ಆರ್ಥಿಕ ನಷ್ಟ ಭರ್ತಿಗೆ ಮತ್ತೊಮ್ಮೆ 900 ಮಳಿಗೆ ತೆರೆಯಲು ಅನುಮತಿ ನೀಡಿ ಆದೇಶ ಹೊರಡಿಸಿದೆ.
ಈ ಆದೇಶದಲ್ಲಿ 900-11 (2) ಮಳಿಗೆಗಳನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಗ್ರಾಮ ಪಂಚಾಯತಿಯಿಂದ ಮತ್ತೊಂದು ಗ್ರಾಮ ಪಂಚಾಯತಿಗೆ ಸ್ಥಳಾಂತರ ಮಾಡಲು ಅವಕಾಶ ಕಲ್ಪಿಸಲಾಗಿದೆ.