ಬೆಂಗಳೂರು:ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುತ್ತಿದ್ದ ಪ್ರಯಾಣಿಕರಿಗೆ ಇದೀಗ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಅದರ ಪ್ರಕಾರ ಕೊರೊನಾ ಲಕ್ಷಣಗಳಿಲ್ಲದಿದ್ದರೆ 14 ದಿನಗಳ ಕ್ವಾರಂಟೈನ್ ಅಗತ್ಯವಿಲ್ಲ ಎಂದು ತಿಳಿಸಿದೆ.
ಅಂತಾರಾಜ್ಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ... ಕೊರೊನಾ ಲಕ್ಷಣಗಳಿಲ್ಲದಿದ್ದರೆ ಕ್ವಾರಂಟೈನ್ ಇಲ್ಲ! - ಮಹಾಮಾರಿ ಕೊರೊನಾ
ರಾಜ್ಯದಲ್ಲಿ ಕೊರೊನಾ ಹಾವಳಿ ಜೋರಾಗಿರುತ್ತಿರುವ ಮಧ್ಯೆ ಅಂತಾರಾಜ್ಯ ಸಂಚಾರಕ್ಕಾಗಿ ವಿಧಿಸಿದ್ದ ನಿರ್ಬಂಧ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.
ರಾಜ್ಯ ಸರ್ಕಾರದಿಂದ ಇಂದು ಹೊಸದಾಗಿ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಸರಕು ಮತ್ತು ಯಾವುದೇ ಇತರೆ ವಾಹನಗಳ ಮೇಲೆ ನಿರ್ಬಂಧಗಳಿರುವುದಿಲ್ಲ. ಜತೆಗೆ ಈ-ಪಾಸ್ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ. ರಾಜ್ಯದಲ್ಲಿ ಅಂತಾರಾಜ್ಯ ಪ್ರಯಾಣಿಕರು ಹಾಗೂ ಪ್ರಯಾಣಕ್ಕಾಗಿ ಹೊರಡಿಸಿದ್ದ ಎಲ್ಲ ಸುತ್ತೋಲೆ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದ್ದು, ಕೊರೊನಾ ವಾಚ್, ಸೇವಾಸಿಂಧು ನೋಂದಣಿ, ಗಡಿ ಭಾಗಗಳಲ್ಲಿ ವೈದ್ಯಕೀಯ ತಪಾಸಣೆ, ಕ್ವಾರಂಟೈನ್ ಸೀಲ್, ಮನೆ ಬಾಗಿಲುಗಳಿಗೆ ಪೋಸ್ಟರ್ ಹಚ್ಚುವಿಕೆ ರದ್ದುಗೊಳಿಸಲಾಗಿದೆ.
ಪ್ರಮುಖವಾಗಿ ರಾಜ್ಯಕ್ಕೆ ಬರುವ ವ್ಯಕ್ತಿಗಳಲ್ಲಿ ಕೊರೊನಾ ಲಕ್ಷಣಗಳಿಲ್ಲದಿದ್ದರೆ 14 ದಿನಗಳ ಕ್ವಾರಂಟೈನ್ ಅಗತ್ಯವಿಲ್ಲ ಎಂದು ತಿಳಿಸಿದ್ದು, ಇತರರಂತೆ ಅವರು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು ಎಂದಿದೆ. ಒಂದು ವೇಳೆ ಕೊರೊನಾ ಸೋಂಕು ಕಾಣಿಸಿಕೊಂಡರೆ ಸ್ವಯಂ ನಿಗಾ ವಹಿಸುವುದು. ಜತೆಗೆ ಸಹಾಯವಾಣಿ 14410ಗೆ ಕರೆ ಮಾಡುವುದು ಕಡ್ಡಾಯವಾಗಿದೆ. ಜತೆಗೆ ಯಾವುದೇ ಸಂಪರ್ಕಕ್ಕೆ ಬಾರದಂತೆ ನಿಗಾವಹಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಅಗತ್ಯವಾಗಿದೆ ಎಂದು ತಿಳಿಸಿದೆ.