ಕರ್ನಾಟಕ

karnataka

ETV Bharat / state

ಅತಿಥಿ ಉಪನ್ಯಾಸಕರಿಗೆ ₹5 ಸಾವಿರ ವೇತನ ಹೆಚ್ಚಳ, ಆರೋಗ್ಯ ವಿಮೆ ಘೋಷಣೆ

ಅತಿಥಿ ಉಪನ್ಯಾಸಕರಿಗೆ ಗರಿಷ್ಠ 5 ಸಾವಿರ ರೂ. ವೇತನ ಹೆಚ್ಚಿಸಲು ಸಿಎಂ ಸಮ್ಮತಿ ಸೂಚಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

Etv Bharatstate-government-increase-wages-5-thousand-for-guest-lecturers
ಅತಿಥಿ ಉಪನ್ಯಾಸಕರಿಗೆ 5 ಸಾವಿರ ರೂ. ವೇತನ ಹೆಚ್ಚಿಸಿ, ಆರೋಗ್ಯ ವಿಮೆ ಘೋಷಿಸಿದ ಸರ್ಕಾರ

By ETV Bharat Karnataka Team

Published : Dec 29, 2023, 3:28 PM IST

ಬೆಂಗಳೂರು: "ಮುಷ್ಕರನಿರತ ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಯಾದ ಸೇವಾ ಕಾಯಮಾತಿಗೆ ಸರ್ಕಾರ ಒಪ್ಪಿರುವುದಿಲ್ಲ. ಆದರೆ, ಗರಿಷ್ಠ 5,000 ರೂ. ವೇತನ ಹೆಚ್ಚಿಸಲು ಸಮ್ಮತಿಸಿದೆ" ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ. ವಿಕಾಸಸೌಧದಲ್ಲಿಂದು ಅತಿಥಿ ಉಪನ್ಯಾಸಕರ ನಿಯೋಗದ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, "ಅತಿಥಿ ಉಪನ್ಯಾಸಕರಿಗೆ ಗರಿಷ್ಠ ಐದು ಸಾವಿರ ರೂ. ವೇತನ ಹೆಚ್ಚಳ ಮಾಡಲು ಸಿಎಂ ಸಮ್ಮತಿ ಸೂಚಿಸಿದ್ದಾರೆ. ಅವರ ಸೇವಾವಧಿ ಆಧಾರದ ಮೇಲೆ ವೇತನ ಪರಿಷ್ಕರಣೆಯಾಗಲಿದೆ. ಅದರಂತೆ ಗರಿಷ್ಠ 32,000 ರೂ. ವೇತನ ಪಡೆಯುವ ಅತಿಥಿ ಉಪನ್ಯಾಸಕರಿಗೆ 5,000 ರೂ.ನಷ್ಟು ವೇತನ ಹೆಚ್ಚಾಗಲಿದೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕ 55 ಕೋಟಿ ರೂ. ಹೊರೆ ಬೀಳಲಿದೆ" ಎಂದರು.

"ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ವಾರ್ಷಿಕವಾಗಿ ಐದು ಲಕ್ಷ ರೂ. ಆರೋಗ್ಯ ವಿಮೆ ನೀಡಲು ಒಪ್ಪಿಗೆ ಸೂಚಿಸಿದೆ. ವಿಮೆ ಸೌಲಭ್ಯದಿಂದ 5 ಕೋಟಿ ರೂ ಹೊರೆ ಬೀಳಲಿದೆ. 10 ವರ್ಷ ಸೇವೆ ಪೂರೈಸಿದ 60 ವರ್ಷ ಮೀರಿದ ಅತಿಥಿ ಉಪನ್ಯಾಸಕರಿಗೆ ಐದು ಲಕ್ಷ ರೂ. ಇಡಿಗಂಟು ನೀಡಲು ಸರ್ಕಾರ ನಿರ್ಧರಿಸಿದೆ. ಇಡಿಗಂಟಿನಿಂದ ಸರ್ಕಾರಕ್ಕೆ 72 ಕೋಟಿ ರೂ ಹೊರೆ ಬೀಳಲಿದೆ. ಜನವರಿ 1ರಿಂದ ಪರಿಷ್ಕೃತ ವೇತನ ಅನ್ವಯವಾಗಲಿದೆ" ಎಂದು ಮಾಹಿತಿ ನೀಡಿದರು.

ಮುಷ್ಕರ ಕೈ ಬಿಡದಿದ್ದರೆ ಕಠಿಣ ಕ್ರಮ:"ಸೇವೆ ಕಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಮುಷ್ಕರ 37ನೇ ದಿನಕ್ಕೆ ಕಾಲಿಟ್ಟಿದ್ದು, ತರಗತಿಗಳು ನಡೆಯದೇ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ನ. 23ರಿಂದ ತರಗತಿಗಳನ್ನು ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ಮುಷ್ಕರ ಆರಂಭಿಸಿದ್ದು, ತರಗತಿಗೆ ಹಾಜರಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನಾವು ಕ್ರಮ ವಹಿಸುತ್ತಿದ್ದೇವೆ. M.Phil ಮಾಡಿರುವವರಿಗೆ, ಹ್ಯಾಂಡಿಕ್ಯಾಪ್‌ಗಳಿಗೆ, ಸೇವಾ ಹಿರಿತನದ ಬಗ್ಗೆ ನಾವು ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದೇವೆ. 1 ತಿಂಗಳು ಸಮಯ ಹಾಳಾಗಿದೆ. ಆದ್ದರಿಂದ ಕೆಲಸಕ್ಕೆ ಹಾಜರಾಗಿ. ಜನವರಿ 1ರಿಂದ ಕೆಲಸಕ್ಕೆ ಹಾಜರಾಗಿ ಅಂತ ಹೇಳಿದ್ದೇವೆ. ಅವರು ಸಹಕರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಸಿದ್ದೇವೆ" ಎಂದರು.

"ರಜೆ ಇಲ್ಲ ಅಂತಲೂ ಗಮನಕ್ಕೆ ತಂದಿದ್ದಾರೆ. 15 ಗಂಟೆ ಕೆಲಸ ಮಾಡುವವರಿಗೆ ತಿಂಗಳಿಗೆ 1 ವೇತನ ಸಹಿತ ರಜೆ ಕೊಡುವುದಕ್ಕೆ ತೀರ್ಮಾನ ಮಾಡಿದ್ದೇವೆ‌‌. ಪ್ರತಿ ವರ್ಷ ಕೌನ್ಸಿಲಿಂಗ್ ಮೂಲಕ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡುತ್ತೇವೆ. ಈಗಾಗಲೇ ಅತಿಥಿ ಉನ್ಯಾಸಕ ಹುದ್ದೆಗೆ 30 ಸಾವಿರ ಜನ ಅರ್ಜಿ ಹಾಕಿದ್ದಾರೆ.‌ ಈಗಾಗಲೇ ಕೌನ್ಸಿಲಿಂಗ್ ಮೂಲಕ 10,300 ಜನ ಆಯ್ಕೆ ಆಗಿದ್ದಾರೆ. ಇದರ ಮೇಲೂ ಹಠಕ್ಕೆ ಬಿದ್ದರೆ ನಾವು ಮುಂದಿನ ಕ್ರಮ‌ ಕೈಗೊಳ್ಳುತ್ತೇವೆ" ಎಂದು ಎಚ್ಚರಿಸಿದರು.

ಮುಷ್ಕರ ಮುಂದುವರಿಸಲು ನಿರ್ಧಾರ:ಇತ್ತ ಸರ್ಕಾರವು ವೇತನ ಪರಿಷ್ಕರಣೆ ಸೇರಿ ಆರೋಗ್ಯ ವಿಮೆ, ಇಡಿಗಂಟು ನೀಡುವ ನಿರ್ಧಾರ ಕೈಗೊಂಡಿದ್ದರೂ, ಮುಷ್ಕರನಿರತ ಅತಿಥಿ ಉಪನ್ಯಾಸಕರು ಪ್ರತಿಭಟನೆಯಿಂದ ಹಿಂದೆ ಸರಿಯದಿರಲು ನಿರ್ಧರಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅತಿಥಿ ಉಪನ್ಯಾಸಕರು ಸೇವೆ ಕಾಯಮಾತಿ ಬೇಡಿಕೆ ಈಡೇರಿಸುವವರೆಗೂ ನಾವು ಮುಷ್ಕರ ಕೈಬಿಡಲ್ಲ. ಬೇಡಿಕೆ ಈಡೇರಿಸುವಂತೆ ತುಮಕೂರಿನಿಂದ ಅತಿಥಿ ಉಪನ್ಯಾಸಕರು ಬೆಂಗಳೂರಿಗೆ ಜ.1ಕ್ಕೆ ಪಾದಯಾತ್ರೆ ಬರಲಿದ್ದೇವೆ ಎಂದರು.

ಇದನ್ನೂ ಓದಿ:ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ನೂತನ ಬಸ್ ನಿಲ್ದಾಣಗಳ ಉದ್ಘಾಟನೆ

ABOUT THE AUTHOR

...view details