ಬೆಂಗಳೂರು :ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹೊಸ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆ ಕಾಯ್ದೆ ರದ್ದುಗೊಳಿಸಿ, ಹಳೆ ಕಾಯ್ದೆಯ ಮೂಲ ಸ್ವರೂಪ ಉಳಿಸಿಕೊಂಡು ಸುಧಾರಿತ ರೂಪದಲ್ಲಿ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ವಿಚಾರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಇಂದು ಎಚ್.ಕೆ.ಪಾಟೀಲ್ ಸಭೆ ನಡೆಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಪಿಎಂಸಿ ತಿದ್ದುಪಡಿ ವಿಧೇಯಕವನ್ನು ಜುಲೈನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲಾಗುವುದು. ಕಾಯಿದೆಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಸಲಾಗಿದೆ. ಮುಂದಿನ ವಾರ ಮತ್ತೊಂದು ಸಭೆ ನಡೆಸಿ ತಜ್ಞರ ಅಭಿಪ್ರಾಯ ಪಡೆದು ವಿಧೇಯಕಕ್ಕೆ ಅಂತಿಮ ರೂಪ ನೀಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದಂತೆ ನಾನು ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಸಭೆ ನಡೆಸಿ ಸುರ್ದೀಘವಾದ ಚರ್ಚೆ ಮಾಡಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ರೈತರ ಕಲ್ಯಾಣವನ್ನು ಬದಿಗೊತ್ತಿ ಕೃಷಿ ಮಾರುಕಟ್ಟೆ ಸಮಿತಿಗಳ ಸತ್ವ ಹಾಗೂ ಶಕ್ತಿಯನ್ನು ತೆಗೆದು ಹಾಕುವ, ಸಡಿಲಗೊಳಿಸುವ ತಿದ್ದುಪಡಿ ಮಾಡಲಾಗಿತ್ತು. ರೈತರಿಂದ ವಿರೋಧವಾದ ನಂತರ ಕೇಂದ್ರ ಸರ್ಕಾರ ವಿಧೇಯಕಗಳನ್ನು ವಾಪಸ್ ಪಡೆದರೂ, ರಾಜ್ಯದಲ್ಲಿ ಎಪಿಎಂಸಿ ಕಾಯಿದೆ ಪುನರುಜ್ಜೀವನಗೊಳಿಸಿರಲಿಲ್ಲ. ಹೀಗಾಗಿ ನಾವು ಎಪಿಎಂಸಿ ಕಾಯಿದೆಯ ಮೂಲ ಸ್ವರೂಪವನ್ನು ಉಳಿಸಿಕೊಂಡು ರೈತರಿಗೆ ಅನುಕೂಲವಾಗುವ ಅಂಶಗಳನ್ನು ಉಳಿಸಿ ಮತ್ತಷ್ಟು ಸುಧಾರಿತ ರೂಪದಲ್ಲಿ ವಿಧೇಯಕ ತರುತ್ತಿದ್ದೇವೆ ಎಂದು ಪಾಟೀಲ್ ಭರವಸೆ ನೀಡಿದರು.
ವ್ಯಾಜ್ಯ ನಿರ್ವಹಣಾ ಪದ್ಧತಿಯಲ್ಲೇ ಲೋಪ: ರಾಜ್ಯ ಸರ್ಕಾರ 1.85 ಲಕ್ಷ ಪ್ರಕರಣಗಳಲ್ಲಿ ಸೋತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸರ್ಕಾರಕ್ಕೆ ಸೋಲುಂಟಾಗಲು ವ್ಯಾಜ್ಯ ನಿರ್ವಹಣಾ ಪದ್ಧತಿಯಲ್ಲೇ ಲೋಪವಿರುವುದನ್ನು ಗುರುತಿಸಿದ್ದೇವೆ. ವ್ಯಾಜ್ಯ ನಿರ್ವಹಣೆಯಲ್ಲಿ ಸರ್ಕಾರದ ಹಾಗೂ ರಾಜ್ಯದ ಹಿತ ಕಾಪಾಡುವ ಉದ್ದೇಶದಿಂದ ಸಿಪಿಸಿಗೆ ತಿದ್ದುಪಡಿ ತರುತ್ತೇವೆ. ಮುಂದೆ ಈ ರೀತಿ ಆಗಬಾರದು ಎಂಬ ಕಾರಣಕ್ಕಾಗಿ ತಿದ್ದುಪಡಿ ವಿಧೇಯಕವನ್ನು ತರಲು ಉದ್ದೇಶಿಸಲಾಗಿದೆ.