ಬೆಂಗಳೂರು: ಸಿವಿಲ್ ಕಾಮಗಾರಿಗಳ ಹಲವಾರು ಅಂದಾಜು ವೆಚ್ಚಗಳು ಹೆಚ್ಚುವರಿಯಾಗಿ ಪರಿಷ್ಕೃತಗೊಳ್ಳುತ್ತಿರುವುದನ್ನು ನಿಯಂತ್ರಿಸಲು ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಲೋಕೋಪಯೋಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಇಬ್ಬರು ಸದಸ್ಯರನ್ನೊಳಗೊಂಡ ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ ರಚಿಸಿ ಆದೇಶಿಸಿದೆ. ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಅಂದಾಜುಗಳು ಪರಿಷ್ಕೃತಗೊಳ್ಳುತ್ತಿರುವುದರ ಬಗ್ಗೆ ಸಮಗ್ರವಾಗಿ ಪರಾಮರ್ಶಿಸಿ ಹಾಗೂ ಅಧ್ಯಯನ ನಡೆಸಿ ಕಾಮಗಾರಿಗಳ ಅಂದಾಜುಗಳು ಅನಗತ್ಯವಾಗಿ ಪರಿಷ್ಕೃತಗೊಳ್ಳುವುದನ್ನು ತಡೆಗಟ್ಟಲು, ನಿಯಂತ್ರಿಸಲು ಸೂಕ್ತ ಸಲಹೆ/ಸೂಚನೆಗಳನ್ನು ಒಳಗೊಂಡ ವರದಿಯನ್ನು ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳಡಿ ಕೈಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಹಲವಾರು ಕಾಮಗಾರಿಗಳ ಅನುಷ್ಠಾನದಲ್ಲಿ ಯೋಜನೆ ಮತ್ತು ವಿನ್ಯಾಸ ತಯಾರಿಸುವಲ್ಲಿನ ನ್ಯೂನ್ಯತೆಗಳು, ಅವೈಜ್ಞಾನಿಕ ವಿಸ್ತೃತ ಯೋಜನಾ ವರದಿ ತಯಾರಿಕೆ, ಅಗತ್ಯವಿರುವ ಎಲ್ಲ ಐಟಂಗಳನ್ನೊಳಗೊಂಡ ಸಮಗ್ರವಾದ ಅಂದಾಜು ತಯಾರಿಸದೇ ಇರುವುದು, ಭೂಸ್ವಾಧೀನ ಪ್ರಕ್ರಿಯೆ, ಪರಿಸರ ಸಂಬಂಧಿತ ತೀರುವಳಿ ಮುಂತಾದ ಅಗತ್ಯವಿರುವ ಶಾಸನಬದ್ಧ ತೀರುವಳಿ ಸಕಾಲದಲ್ಲಿ ಪಡೆಯದೇ ಕಾಮಗಾರಿಗಳನ್ನು ಆರಂಭಿಸುವುದು, ಗುತ್ತಿಗೆ ಒಪ್ಪಂದದಲ್ಲಿ ನಿಖರವಾದ ನಿಬಂಧನ/ಷರತ್ತುಗಳ ವಿಧಿಸುವ ಕೊರತೆಯಿಂದ ಉಂಟಾಗುವ ಅರ್ಬಿಟ್ರೇಷನ್/ನ್ಯಾಯಾಲಯಗಳ ದಾವೆಗಳಿಂದ ಉಂಟಾಗುವ ವಿಳಂಬ ಹಾಗೂ ಇತರ ಕಾರಣಾಂತರಗಳಿಂದ ಕಾಮಗಾರಿಗಳ ಮೂಲ ಅಂದಾಜು ಮೊತ್ತವು ಪರಿಷ್ಕೃತಗೊಂಡು ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟಾಗುತ್ತಿದೆ.
ಜೊತೆಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗುತ್ತಿರುವುದರಿಂದ ಈ ಕಾಮಗಾರಿಗಳ ಸೌಲಭ್ಯಗಳು ಸಾರ್ವಜನಿಕರಿಗೆ ಸಕಾಲದಲ್ಲಿ ತಲುಪುವಲ್ಲಿ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೂಲ ಅಂದಾಜುಗಳು ಪರಿಷ್ಕರಣೆಗೊಳ್ಳುವ ಮೂಲಕ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿರುವುದನ್ನು ತಡೆಗಟ್ಟಲು ಹಾಗೂ ಸರ್ಕಾರದ ಕಾಮಗಾರಿಗಳ ಸೌಲಭ್ಯಗಳು ಸಾರ್ವಜನಿಕರಿಗೆ ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ ಕಾಮಗಾರಿಗಳ ಅಂದಾಜುಗಳು ಪರಿಷ್ಕರಣೆಯಾಗಲು ಕಾರಣವಾಗುವ ಎಲ್ಲ ಅಂಶಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ನ್ಯೂನ್ಯತೆಗಳನ್ನು ಗುರುತಿಸಿ ಸೂಕ್ತ ಸಲಹೆ ಸೂಚನೆಗಳುಳ್ಳ ವರದಿಯನ್ನು ನೀಡಲು ಪರಿಣಿತರನ್ನೊಳಗೊಂಡ ಸಮಿತಿಯನ್ನು ರಚಿಸಲು ಸರ್ಕಾರ ತೀರ್ಮಾನಿಸಿದೆ.
ಸಮಿತಿ ಪರಿಗಣಿಸಬೇಕಾದ ಪ್ರಮುಖ ಅಂಶಗಳೇನು?:ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸ ತಯಾರಿಕೆಯಲ್ಲಿ ಸುಧಾರಣೆ ಕುರಿತು, ಕಾಮಗಾರಿಗಳ ಸ್ವರೂಪ, ಭೂ ಒಡೆತನ ಹಾಗೂ ಕಾಮಗಾರಿಗೆ ಅಗತ್ಯವಿರುವ ಭೂಮಿಯ ಪರಿಮಾಣ ಆಧರಿಸಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಾಲಮಿತಿ ನಿಗದಿಪಡಿಸುವ ಕುರಿತು 10 ಕೋಟಿವರೆಗಿನ ಅಂದಾಜು ಮೊತ್ತದ ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸವನ್ನು ಪರಿಣಾಮಕಾರಿಯಾಗಿ ರೂಪಿಸಿ ಸಕಾಲದಲ್ಲಿ ಪೂರ್ಣಗೊಳಿಸಲು ಸಾಧ್ಯವಿರುವುದರಿಂದ ಇವುಗಳ ಅನುಮೋದಿತ ಅಂದಾಜುಗಳು, ಮೂಲ ಅಂದಾಜು ಮೊತ್ತವನ್ನು ಮೀರಿ ಪರಿಷ್ಕೃತಗೊಳ್ಳುವುದನ್ನು ನಿರ್ಬಂಧಗೊಳಿಸುವ ಬಗ್ಗೆ ಅಧ್ಯಯನ ನಡೆಸಬೇಕು.