ಬೆಂಗಳೂರು: ಏಪ್ರಿಲ್ 20ರಿಂದ ದ್ವಿಚಕ್ರ ವಾಹನಗಳಿಗೆ ಅನುಮತಿ ನೀಡುವ ನಿರ್ಧಾರವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.
ದ್ವಿಚಕ್ರ ವಾಹನಕ್ಕೆ ಅನುಮತಿ ನೀಡುವ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು. ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಯಥಾಸ್ಥಿತಿ ಲಾಕ್‌ಡೌನ್ ಮುಂದುವರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಲಾಕ್‌ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರೆಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತ ಐ.ಟಿ/ಬಿ.ಟಿ. ಕ್ಷೇತ್ರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು, ಉಳಿದಂತೆ ಮನೆಯಿಂದಲೇ ಕೆಲಸ ಮಾಡುವ ನೀತಿಯನ್ನು ಮುಂದುವರೆಸಲು ನಿರ್ಧರಿಸಿದೆ. ಇದಕ್ಕೂ ಮುಂಚೆ ಐಟಿ/ಬಿಟಿ ಸಂಸ್ಥೆಗಳಲ್ಲಿ ಶೇ. 33ರಷ್ಟು ಸಿಬ್ಬಂದಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಈಗ ಆ ನಿರ್ಧಾರದಿಂದಲೂ ಹಿಂದೆ ಸರಿದಿದೆ.
ಹಿರಿಯ ಅಧಿಕಾರಿಗಳ ಜೊತೆ ಇಂದು ಗೃಹ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಲಾಕ್‌ಡೌನ್ ಸಡಿಲಿಸಿ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಮಧ್ಯೆಯೂ ಈ ಸಡಿಲಿಕೆ ಮಾಡಿರುವ ಕಾರಣ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ ಸರ್ಕಾರ ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಇತ್ತ ಗೃಹ ಇಲಾಖೆಯೂ ಸಡಿಲಿಕೆ ಸಂಬಂಧ ತನ್ನ ಆಕ್ಷೇಪ ವ್ಯಕ್ತಪಡಿಸಿತ್ತು. ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಬಳಿಕ ಗೃಹ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಡಿಲಿಕೆ ನಿರ್ಧಾರದಿಂದ ಸಿಎಂ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.