ಬೆಂಗಳೂರು:ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ಬಲಿಜ ಸಮುದಾಯದ ಬಹು ವರ್ಷಗಳ ಬೇಡಿಕೆಯನ್ನು ಬೊಮ್ಮಾಯಿ ಸರ್ಕಾರ ಈಡೇರಿಸಿದೆ. ರಾಜ್ಯ ವಿಧಾನಸಭಾ ಚುನಾವಣೆ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಪ್ರಬಲ ಬಲಿಜ ಸಮುದಾಯದ ಬೇಡಿಕೆಯನ್ನು ಈಡೇರಿಸಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪವರ್ಗ-3ಎ ರಲ್ಲಿ ಔದ್ಯೋಗಿಕ ಮೀಸಲಾತಿ ಹಾಗೂ ಪ್ರವರ್ಗ-2ಎ ರಲ್ಲಿ ಶೈಕ್ಷಣಿಕ ಮೀಸಲಾತಿ ಕಲ್ಪಿಸಿ ಆದೇಶಿಸಿರುವ ಬಲಿಜ, ಬಲಜಿಗ/ಬಣಜಿಗ/ಗೌಡಬಣಜಿಗ, ನಾಯ್ಡು, ತೆಲಗ ಬಲಿಜ/ತೆಲಗ ಬಣಜಿಗ, ಶೆಟ್ಟಿ ಬಲಿಜ/ಶೆಟ್ಟಿ ಬಣಜಿಗ/ಬಣಜಿಗಶೆಟ್ಟಿ, ದಾಸರ ಬಲಿಜ/ದಾಸರ ಬಲಜಿಗ/ದಾಸರ ಬಣಜಿಗ, ದಾಸ ಬಣಜಿಗ, ಕಸ್ಟನ್, ಮುನ್ನೂರ/ಮುನ್ನಾರ/ಮುನ್ನೂರ್ ಕಾಪು ಬಳೆಗಾರ/ಬಳೆ ಬಣಜಿಗ/ಬಳೆ ಬಲಜಿಗ, ಬಳೆ ಛಟ್ಟಿ, ಬಣಗಾರ, ರಡ್ಡಿ (ಬಲಿಜ), ಜನಪ್ಪನ್, ಉಪ್ಪಾರ(ಬಲಿಜ), ತುಲೇರು ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ "ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ"ವನ್ನು ಸ್ಥಾಪಿಸಿ ಆದೇಶಿಸಲಾಗಿದೆ.
ಬಲಿಜ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು ಎಂದು ಇದೇ ಜನವರಿಯಲ್ಲಿ ಬಲಿಜ ಸಮುದಾಯದವರು ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ್ದರು. ಜೊತೆಗೆ ನಿಗಮ ಸ್ಥಾಪಿಸುವಂತೆ ಆಗ್ರಹಿಸಿದ್ದರು. ಬಲಿಜ ಸಮುದಾಯಕ್ಕೆ ಸೇರಿರುವ 40 ಲಕ್ಷಕ್ಕೂ ಹೆಚ್ಚು ಜನ ರಾಜ್ಯದಲ್ಲಿದ್ದಾರೆ. ಕೃಷಿ, ಕೂಲಿ, ಹೈನುಗಾರಿಕೆ, ಬಳೆ, ಹೂವು ಹಾಗೂ ದ್ರವ್ಯಗಳ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದಿದ್ದಾರೆ. ಉದ್ಯೋಗ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲಿ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದರು.
ಇದೀಗ ಬೊಮ್ಮಾಯಿ ಸರ್ಕಾರ ಬಲಿಜ ಸಮುದಾಯದ ಪ್ರಮುಖ ಬೇಡಿಕೆಯಲ್ಲೊಂದಾದ ನಿಗಮವನ್ನು ರಚಿಸಿದೆ. ಆ ಮೂಲಕ ಬರುವ ಚುನಾವಣೆಯಲ್ಲಿ ಬಲಿಜ ಸಮುದಾಯದ ಮತ ಸೆಳೆಯಲು ಮುಂದಾಗಿದೆ.