ಕರ್ನಾಟಕ

karnataka

ETV Bharat / state

ಕೊರೊನಾ ಸಂಕಷ್ಟ ಕಾಲದಲ್ಲೂ ರಾಜ್ಯಕ್ಕೆ ಹರಿದುಬಂತು 28 ಸಾವಿರ ಕೋಟಿ ರೂ ಬಂಡವಾಳ - cm bs yadiyurappa

ಎಲೆಕ್ಟ್ರಿಕ್‌ ವಾಹನ, ಡೇಟಾ ಸೆಂಟರ್‌, ಏರೋಸ್ಪೇಸ್‌ ಹಾಗೂ ರಕ್ಷಣಾ ಕಂಪನಿಗಳೂ ಸೇರಿದಂತೆ 23 ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿವೆ. ಕೋವಿಡ್​ ನಡುವೆಯೂ ರಾಜ್ಯಕ್ಕೆ 28 ಸಾವಿರ ಕೋಟಿ ರೂ ಬಂಡವಾಳ ಹರಿದುಬಂದಿದೆ.

karnatakakarnataka
28 ಸಾವಿರ ಕೋಟಿ ಬಂಡವಾಳ

By

Published : Jul 15, 2021, 7:15 PM IST

Updated : Jul 15, 2021, 7:43 PM IST

ಬೆಂಗಳೂರು:ಕೊರೊನಾ ಎರಡನೇ ಅಲೆಯ ನಡುವೆಯೂ ರಾಜ್ಯಕ್ಕೆ 28 ಸಾವಿರ ಕೋಟಿ ರೂ ಬಂಡವಾಳ ಹರಿದುಬಂದಿದೆ. ಎಲೆಕ್ಟ್ರಿಕ್‌ ವಾಹನ, ಡೇಟಾ ಸೆಂಟರ್‌, ಏರೋಸ್ಪೇಸ್‌ ಹಾಗೂ ರಕ್ಷಣಾ ಕಂಪನಿಗಳು ಸೇರಿದಂತೆ 23 ಕಂಪನಿಗಳಿಂದ ರಾಜ್ಯದಲ್ಲಿ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಇನ್ವೆಸ್ಟ್‌ ಕರ್ನಾಟಕ ವೇದಿಕೆಯ ಸಹಯೋಗದೊಂದಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಕಾಲಮಿತಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸಿ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಇನ್ವೆಸ್ಟ್‌ ಕರ್ನಾಟಕ ವೇದಿಕೆ ಸಮಾರಂಭ

ಈ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, "ಕೋವಿಡ್‌ ಸಂಕಷ್ಟದ ನಡುವೆಯೂ ರಾಜ್ಯ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿದೆ. ಅದರ ಫಲವಾಗಿಯೇ ವಿವಿಧ ಕಂಪನಿಗಳು ಹೂಡಿಕೆ ಮಾಡಲು ಬಂದಿವೆ, ಸರ್ಕಾರದ ಉದ್ಯಮ ಸ್ನೇಹಿ ನೀತಿಗಳಿಂದ ಇದು ಸಾಧ್ಯವಾಗಿದೆ" ಎಂದರು.

"ಕೋವಿಡ್‌ ಸಂಕಷ್ಟದ ನಡುವೆಯೂ ಕಳೆದ ವರ್ಷದ ಮಾರ್ಚ್‌ನಿಂದ ಕರ್ನಾಟಕ ಸರ್ಕಾರ 77,000 ಕೋಟಿ ರೂ. ಹೂಡಿಕೆಯ 520ಕ್ಕೂ ಹೆಚ್ಚು ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದಲ್ಲದೇ, ಹೆಚ್ಚುವರಿ ಪ್ರಸ್ತಾವನೆಗಳು ಹಾಗೂ 23,000 ಕೋಟಿ ರೂ. ಮೊತ್ತದ ಒಪ್ಪಂದವೂ ಸೇರಿ ಒಟ್ಟು 1 ಲಕ್ಷ ಕೋಟಿ ರೂ. ಹೂಡಿಕೆ ಆಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿರುವ ರಾಜ್ಯದ ಬಗ್ಗೆ ಹೂಡಿಕೆದಾರರು ಅಚಲ ವಿಶ್ವಾಸ ಇರಿಸಿದ್ದಾರೆ. ಹೂಡಿಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಭೂ, ಕಾರ್ಮಿಕ ಸೇರಿದಂತೆ ಹಲವು ಸುಧಾರಣೆಗಳನ್ನು ತರಲಾಗಿದೆ" ಎಂದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಮಾರಂಭ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‌ ಮಾತನಾಡಿ, "ಕರ್ನಾಟಕ ಹೂಡಿಕೆದಾರರ ನೆಚ್ಚಿನ ತಾಣವನ್ನಾಗಿಸುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ನಾನಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಲು ಹಲವು ಪೂರಕ ಕ್ರಮಗಳನ್ನು ಕೈಗೊಂಡಿದೆ. ಆನ್‌ಲೈನ್‌ ಮೂಲಕವೇ ಹೂಡಿಕೆ ಅನುಮೋದನೆಗಳು ಸಾಧ್ಯವಾದ್ದರಿಂದ ಕೋವಿಡ್‌ ಸಾಂಕ್ರಾಮಿಕದ ಮಧ್ಯೆಯೂ ಈ ಪ್ರಮಾಣದ ಹೂಡಿಕೆ ಸಾಧ್ಯವಾಗಿದೆ. ನೂತನ ಕೈಗಾರಿಕಾ ನೀತಿ 2020-2025 ಹಾಗೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮದಲ್ಲಿನ ತಿದ್ದುಪಡಿಗಳಿಂದ ನಮ್ಮ ರಾಜ್ಯ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ" ಎಂದರು.

ಜಾಗತಿಕ ಹೂಡಿಕೆದಾರರ ಸಮಾವೇಶ:

ಮುಂದಿನ ವರ್ಷ ಫೆಬ್ರವರಿ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಇಂದು ನಿರ್ಧರಿಸಲಾಯಿತು. ಬಂಡವಾಳ ಆಕರ್ಷಿಸಲು ವಲಯ ನಿರ್ದಿಷ್ಟ ಕ್ಲಸ್ಟರ್‌ಗಳನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಆಟಿಕೆ, ಜವಳಿ ಮತ್ತು ಇಎಸ್‌ಡಿಎಂ ಕ್ಲಸ್ಟರ್‌ಗಳಿಗೆ ಈಗಾಗಲೇ ಪ್ರತ್ಯೇಕ ನೀತಿ ರೂಪಿಸಲಾಗಿದೆ. ಕರ್ನಾಟಕವನ್ನು ಜಾಗತಿಕ ಉತ್ಪಾದನಾ ಹಬ್‌ ಆಗಿ ರೂಪಿಸುವ ಗುರಿಯೊಂದಿಗೆ 2 ಮತ್ತು 3ನೇ ಹಂತದ ನಗರಗಳಲ್ಲಿ ನಿರ್ದಿಷ್ಟ ಕ್ಲಸ್ಟರ್‌ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌, ಧಾರವಾಡದಲ್ಲಿ ಎಲೆಕ್ಟ್ರಾನಿಕ್‌ ಕ್ಲಸ್ಟರ್‌, ಯಾದಗಿರಿಯಲ್ಲಿ ಫಾರ್ಮಾ ಕ್ಲಸ್ಟರ್‌ ಇದೆ. ಇಂಥ ಹಲವು ಕ್ಲಸ್ಟರ್‌ಗಳ ನಿರ್ಮಾಣಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡುವುದು"ಎಂದು ಶೆಟ್ಟರ್ ಹೇಳಿದರು.

"ಲಿಥಿಯಂ -ಅಯಾನ್‌ ಸೆಲ್‌ ಉತ್ಪಾದನಾ ಕ್ಷೇತ್ರದ ಪ್ರಮುಖ ಕಂಪನಿಯಾಗಿರುವ ಅಮೆರಿಕದ ಸಿ4ವಿ ಇಂದು ರಾಜ್ಯದಲ್ಲಿ 4015 ಕೋಟಿ ರೂಪಾಯಿಗಳ ಹೂಡಿಕೆ ಮಾಡಲು ಮುಂದಾಗಿದೆ. ಸಿಂಗಾಪುರ ಮೂಲದ ಎಲ್‌ಎನ್‌ಜಿ ಟರ್ಮಿನಲ್ ಆಪರೇಟರ್ ಎಲ್‌ಎನ್‌ಜಿ ಅಲೈಯನ್ಸ್‌ನೊಂದಿಗೆ 2250 ಕೋಟಿ ರೂ. ಒಪ್ಪಂದ, ಅದಾನಿ ಡೇಟಾ ಸೆಂಟರ್‌ ಸ್ಥಾಪನೆಗೆ 5000 ಕೋಟಿ ರೂ. ಒಪ್ಪಂದ ಸೇರಿದಂತೆ ಕೋವಿಡ್‌ ಸಂಕಷ್ಟದ ನಡುವೆಯೂ ಹೂಡಿಕೆ ಪ್ರಸ್ತಾವನೆಗಳು ಹಾಗೂ ಒಪ್ಪಂದಗಳ ಮೂಲಕ ಕರ್ನಾಟಕಕ್ಕೆ 28,000 ಕೋಟಿ ರೂ ಹೂಡಿಕೆ ಹರಿದು ಬರಲಿದೆ"ಎಂದು ಅವರು ವಿವರಿಸಿದರು.

"ಬೆಂಗಳೂರಿನ ಆಚೆಗೂ ಉದ್ಯಮಗಳನ್ನು ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಸರ್ಕಾರದ ಉದ್ದೇಶ. ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಉದ್ಯಮಗಳಿಗೆ ನುರಿತ ಕೆಲಸಗಾರರನ್ನು ಒದಗಿಸುವ ನಿಟ್ಟಿನಲ್ಲಿ ಕೌಶಲ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ಪೂರಕವಾಗಿರಲಿದೆ" ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ತಿಳಿಸಿದರು.

Last Updated : Jul 15, 2021, 7:43 PM IST

ABOUT THE AUTHOR

...view details