ಬೆಂಗಳೂರು :ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದ ವಜುಭಾಯ್ ವಾಲಾ ಅವರ ದರ್ಬಾರ್ ಇಂದಿಗೆ ಕೊನೆಗೊಂಡಿದೆ. ಖುರ್ಷಿದ್ ಅಲಂ ಖಾನ್ ನಂತರ ಅತಿ ಹೆಚ್ಚು ದಿನಗಳ ಕಾಲ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ವಾಲಾ ಹಿಂದಿ ಭಾಷಣ, ಮಸೂದೆಗಳ ವಾಪಸ್, ಗುಜರಾತಿ ಉತ್ಸವ ವಿವಾದದ ಮೂಲಕ ಸುದ್ದಿಯಾದವರು. ಜನಸಾಮಾನ್ಯರನ್ನು ರಾಜಭವನದಿಂದ ದೂರವಿಟ್ಟ ರಾಜ್ಯಪಾಲರು ಎನ್ನುವ ಟೀಕೆಯನ್ನೂ ಸಹ ವಾಲಾ ಎದುರಿಸಿದ್ದಾರೆ.
2014ರ ಸೆಪ್ಟೆಂಬರ್ 2ರಂದು ಕರ್ನಾಟಕದ ರಾಜ್ಯಪಾಲರಾಗಿ ವಜುಭಾಯ್ ರೂಢಾಭಾಯ್ ವಾಲಾ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಐದು ವರ್ಷದ ಅವಧಿ ಪೂರ್ಣಗೊಳಿಸಿದ ನಂತರವೂ 1 ವರ್ಷ 10 ತಿಂಗಳು ಅಧಿಕಾರ ನಡೆಸಿದ್ದಾರೆ. ಐದು ವರ್ಷ ಮುಗಿದ ನಂತರ ಹೊಸ ರಾಜ್ಯಪಾಲರ ನೇಮಕದ ಬದಲು ವಾಲಾ ಅವರನ್ನೇ ಒಂದು ವರ್ಷಕ್ಕೆ ಮುಂದುವರೆಸಿ ಆ ಅವಧಿ ಮುಗಿದ ನಂತರವೂ ಹುದ್ದೆಯಲ್ಲಿ ಮುಂದುವರೆಸಲಾಗಿತ್ತು.
ಅತಿ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ ರಾಜ್ಯಪಾಲರು :ಒಟ್ಟು 6 ವರ್ಷ 10 ತಿಂಗಳು 4 ದಿನ ಕರ್ನಾಟಕದ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಖುರ್ಷಿದ್ ಅಲಂ ಖಾನ್ 1992ರ ಜನವರಿಯಿಂದ 1999ರ ಡಿಸೆಂಬರ್ 2ರವರೆಗೆ ಒಟ್ಟು 7 ವರ್ಷ 330 ದಿನ ರಾಜ್ಯಪಾಲರಾಗಿ ಕರ್ತವ್ಯ ಮಾಡಿದ್ದು ಅತಿ ಹೆಚ್ಚು ದಿನ ರಾಜ್ಯಪಾಲರಾಗಿದ್ದ ಸ್ಥಾನದಲ್ಲಿ ಮೊದಲಿಗರಾಗಿದ್ದಾರೆ. ಅವರ ನಂತರದ ಸ್ಥಾನ ರಾಜ್ಯಪಾಲ ವಜುಭಾಯ್ ವಾಲಾ ಅವರದ್ದಾಗಿದೆ. ರಾಜ್ಯದ ಮೊದಲ ರಾಜ್ಯಪಾಲರಾಗಿದ್ದ ಜಯಚಾಮರಾಜ ಒಡೆಯರ್ 6 ವರ್ಷ 184 ದಿನ ಅಧಿಕಾರದಲ್ಲಿದ್ದರು. ಅವರದು 3ನೇ ಸ್ಥಾನ.
ಹಿಂದಿ ಭಾಷಣದ ವಿವಾದ :ರಾಜ್ಯಪಾಲರಾಗಿ ನೇಮಕಗೊಂಡ ನಂತರ 2015ರ ಫೆಬ್ರವರಿಯಲ್ಲಿ ರಾಜ್ಯಪಾಲರಾಗಿ ತಮ್ಮ ಮೊದಲ ಜಂಟಿ ಅಧಿವೇಶನವನ್ನುದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದರು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಇದೇ ಮೊದಲ ಬಾರಿಗೆ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿ ಹಿಂದಿ ಭಾಷಣ ಮಾಡಲಾಗಿತ್ತು. ರಾಜ್ಯದ ಮೊದಲ ರಾಜ್ಯಪಾಲ ಜಯಚಾಮರಾಜ ಒಡೆಯರ್ ಮಾತ್ರ ಕನ್ನಡಿಗರು. ನಂತರ ಬಂದಿರುವ ಎಲ್ಲರೂ ಕನ್ನಡೇತರರು. ಆದ್ದರಿಂದ ಇಂಗ್ಲಿಷ್ನಲ್ಲಿ ಭಾಷಣ ಮಾಡುತ್ತಿದ್ದರು. ಆದರೆ, ವಾಲಾ ಮೊದಲ ಬಾರಿ ಹಿಂದಿಯಲ್ಲಿ ಭಾಷಣ ಮಾಡಿ ಹೊಸ ಸಂಪ್ರದಾಯ ಹುಟ್ಟು ಹಾಕಿದರು.
ಕನ್ನಡ ರಾಜ್ಯೋತ್ಸವದ ದಿನದಂದೇ ಗುಜರಾತಿ ಉತ್ಸವ :2015ರ ನವೆಂಬರ್ನಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದೇ ಗುಜರಾತಿ ಉತ್ಸವ ಮಾಡಿ ವಿವಾದ ಸೃಷ್ಟಿಸಿಕೊಂಡಿದ್ದರು. ರಾಜ್ಯಪಾಲರ ಈ ನಡೆಯನ್ನು ಕನ್ನಡ ಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ಇದು ಇಷ್ಟಕ್ಕೆ ನಿಲ್ಲದೇ ಅವರು ಭಾಗಿಯಾಗುತ್ತಿದ್ದ ಎಲ್ಲ ಸಭೆ-ಸಮಾರಂಭಗಳಲ್ಲಿಯೂ ಹಿಂದಿಯಲ್ಲೇ ಭಾಷಣ ಮಾಡುತ್ತಿದ್ದರು.
ಜಂಟಿ ಅಧಿವೇಶನ, ಗಣರಾಜ್ಯೋತ್ಸವ ಭಾಷಣಗಳನ್ನು ಹಿಂದಿಯಲ್ಲಿಯೂ ಮಾಡಿ ಕನ್ನಡ ಪರ ಹೋರಾಟಗಾರರಿಂದ ಟೀಕೆಗೊಳಗಾಗಿದ್ದರು. ಎಷ್ಟೇ ಟೀಕೆ, ವಿರೋಧ ಬಂದರೂ ಅದಕ್ಕೆ ಸೊಪ್ಪು ಹಾಕದ ರಾಜ್ಯಪಾಲರು ಹಿಂದಿಯಲ್ಲೇ ರಾಜಭವನದ ಎಲ್ಲ ವ್ಯವಹಾರ ನಡೆಸಿದ್ದರು. ರಾಜಭವನದ ತುಂಬಾ ಗುಜರಾತಿ ಭಾಷಿಕರನ್ನೇ ನೇಮಿಸಿಕೊಂಡಿದ್ದ ವಾಲಾ, ರಾಜಭವನದಲ್ಲಿ ಕನ್ನಡ ಮಾಯವಾಗಿದೆ ಎನ್ನುವ ಟೀಕೆಗೆ ಗುರಿಯಾದರು.
ಮಸೂದೆ ವಾಪಸ್ :ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯಪಾಲ ವಾಲಾ ಮೊದಲ ಬಾರಿ ಬಿಸಿ ಮುಟ್ಟಿಸಿ ರಾಜಭವನದ ಅಧಿಕಾರ ಚಲಾಯಿಸಿದ್ದರು. 2016ರಲ್ಲಿ ರಿಯಲ್ ಎಸ್ಟೇಟ್ ತಿದ್ದುಪಡಿ ಕಾಯ್ದೆಗೆ ಅಂಕಿತ ಹಾಕಲು ನಿರಾಕರಿಸಿದ್ದರು. ವಿಧಾನಸಭೆಯಲ್ಲಿ ಚರ್ಚೆಯಾಗದೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ-2016 ಅನ್ನು ವಾಪಸ್ ಕಳುಹಿಸಿದ್ದರು.
2017ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮುಂಬಡ್ತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಹೊರಡಿಸಿದ್ದ ಆದೇಶ ವಿರೋಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಹಲವು ಕಾರಣ ನೀಡಿ ವಾಪಸ್ ಕಳುಹಿಸಿದ್ದರು. ಯಡಿಯೂರಪ್ಪ ಸರ್ಕಾರದಲ್ಲೂ ಬಿಲ್ ವಾಪಸ್ ಕಳಿಸಿದ ನಿದರ್ಶನಗಳಿವೆ. 2020ರ ಮೇ ತಿಂಗಳಿನಲ್ಲಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದ ಎಪಿಎಂಸಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದರು.
ಅವಿಶ್ವಾಸ ಮಂಡನೆ ಹಿನ್ನೆಲೆಯಲ್ಲಿ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳದಂತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಸೂಚನೆ ನೀಡಿದ್ದರು. ರಾತ್ರೋರಾತ್ರಿ ಕಡತ ವಿಲೇವಾರಿ, ವರ್ಗಾವಣೆ ನಡೆಸುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ್ದರು. 2021ರ ಏಪ್ರಿಲ್ನಲ್ಲಿ ರಾಜ್ಯಪಾಲರು ಸರ್ವಪಕ್ಷ ಸಭೆ ನಡೆಸಿ ಗಮನ ಸೆಳೆದಿದ್ದರು. ಈ ವೇಳೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಲ್ಲಿದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. ಇದೀಗ ಅವರ ಅವಧಿ ಮುಕ್ತಾಯಗೊಂಡಿದ್ದು, ನೂತನ ರಾಜ್ಯಪಾಲರ ನೇಮಕವಾಗಿದೆ.