ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಸಂಭವಿಸಿದ ಸಾವು-ನೋವು, ಕಣ್ಮರೆಯಾದವರ ಪೂರ್ಣ ಮಾಹಿತಿ - 48 ಮಂದಿ ಮೃತಪಟ್ಟಿದ್ದಾರೆ

ಇಂದು ಮಳೆ ಪ್ರಮಾಣ ತಗ್ಗಿದ್ದು, ಪ್ರವಾಹ ಸಹ ಇಳಿಮುಖವಾಗಿದೆ. ಆದರೆ ಮುಂದಿನ ಐದು ದಿನಗಳವರೆಗೆ ಹಲವೆಡೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೃಷ್ಣ ನದಿ ಉಕ್ಕಿ ಹರಿಯುವುದು ಮುಂದುವರೆದಿದ್ದು, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ.

ಪ್ರವಾಹ

By

Published : Aug 13, 2019, 2:02 PM IST

Updated : Aug 13, 2019, 3:54 PM IST

ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಪ್ರವಾಹ ಎಂದರೂ ತಪ್ಪಾಗಲಾರದು. ಮಹಾರಾಷ್ಟ್ರ, ಗೋವಾ ಭಾಗಗಳಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಅತಿ ಹೆಚ್ಚು ನೀರು ಹರಿದು ಬಂದಿದ್ದು, ಕರ್ನಾಟಕದ ಅರ್ಧದಷ್ಟು ಭಾಗವನ್ನು ನುಂಗಿ ಹಾಕಿದೆ. ಈವರೆಗೆ 48 ಮಂದಿ ಮೃತಪಟ್ಟಿದ್ದು, 16 ಮಂದಿ ಕಣ್ಮರೆಯಾಗಿದ್ದಾರೆ ಎಂದು ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯನಿರತ ರಕ್ಷಣಾ ತಂಡಗಳು

ಇಂದು ಮಳೆ ಪ್ರಮಾಣ ತಗ್ಗಿದ್ದು, ಪ್ರವಾಹ ಸಹ ಇಳಿಮುಖವಾಗಿದೆ. ಆದರೆ ಮುಂದಿನ 5 ದಿನಗಳವರೆಗೆ ಹಲವೆಡೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೃಷ್ಣ ನದಿ ಉಕ್ಕಿ ಹರಿಯುವುದು ಮುಂದುವರೆದಿದ್ದು, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆಲಮಟ್ಟಿಯಲ್ಲೂ ಇದೇ ಪರಿಸ್ಥಿತಿ ಇದೆ. ಅಲ್ಲಿಂದ ನೀರಿನ ಹೊರಹರಿವು ಹೆಚ್ಚಾಗಿದ್ದು, ಜಲಾನಯನ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಮುಂದುವರೆದಿದೆ. ಆಲಮಟ್ಟಿಯ ಜೊತೆಗೆ ನಾರಾಯಣಪುರ ಜಲಾಶಯವೂ ಭರ್ತಿಯಾಗಿದೆ. ಹಾಗೆಯೇ, ಭದ್ರ, ತುಂಗಭದ್ರಾ, ಘಟಪ್ರಭ, ಮಲಪ್ರಭ, ಲಿಂಗನಮಕ್ಕಿ, ಸೂಪಾ, ವರಾಹಿ, ಹಾರಂಗಿ, ಹೇಮಾವತಿ, ಕೆ ಆರ್​ಎಸ್ ಮತ್ತು ಕಬಿನಿ ಜಲಾಶಯಗಳು ಬಹುತೇಕ ಭರ್ತಿಯಾಗಿವೆ.

ಇನ್ನು ರಾಜ್ಯದ 17 ಜಿಲ್ಲೆಗಳ 86 ತಾಲೂಕುಗಳು ಹಾಗೂ 2,738 ಗ್ರಾಮಗಳು ಪ್ರವಾಹದ ಸಂಕಷ್ಟಕ್ಕೆ ಸಿಲುಕಿವೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡು 6.7 ಲಕ್ಷದಷ್ಟು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದ್ದು, 50,595 ಜಾನುವಾರುಗಳನ್ನು ರಕ್ಷಿಸಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಸುಮಾರು 4 ಲಕ್ಷದಷ್ಟು ಮಂದಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

4.30 ಲಕ್ಷ ಹೆಕ್ಟೇರ್​ನಷ್ಟು ಬೆಳೆ ಹಾನಿಯಾಗಿದ್ದು, 40 ಸಾವಿರಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಸರ್ಕಾರ ನೀಡಿದ ಮಾಹಿತಿ ಪ್ರಕಾರ, ಬೆಳಗಾವಿಯಲ್ಲೇ ಅತಿ ಹೆಚ್ಚು ಜನ ಮೃತಪಟ್ಟಿದ್ದಾರೆ ಈವರೆಗೆ ಅಲ್ಲಿ 13 ಮಂದಿ ಮೃತಪಟ್ಟು, ನಾಲ್ವರು ನಾಪತ್ತೆಯಾಗಿದ್ದಾರೆ. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸಾವು-ನೋವು ಸಂಭವಿಸಿದ್ದು, ಇವೆರಡು ಜಿಲ್ಲೆಗಳಲ್ಲಿ 8 ಮತ್ತು 7 ಮಂದಿ ಸಾವನ್ನಪಿದ್ದಾರೆ. ಕೊಡಗಿನಲ್ಲಿ ಗುಡ್ಡ ಕುಸಿತದಿಂದಲೇ ಹೆಚ್ಚು ಸಾವು ಸಂಭವಿಸಿದೆ. ಇಲ್ಲಿ ಒಟ್ಟು 7 ಮಂದಿ ನಾಪತ್ತೆಯಾಗಿದ್ದಾರೆ.

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯನಿರತ ರಕ್ಷಣಾ ತಂಡಗಳು

ಮುಂದುವರೆದ ಕಾರ್ಯಾಚರಣೆ: ಇಂದೂ ಸಹ ರಕ್ಷಣಾ ಕಾರ್ಯಾ ಮುಂದುವರೆದಿದ್ದು ಬೆಳಗಾವಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎನ್ ಡಿ ಆರ್ ಎಫ್ ನ 19 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಬೆಳಗಾವಿಗೆ 11 ಕಾಲಮ್ ಆಫ್ ಆರ್ಮಿ, ಬಾಗಲಕೋಟೆ, ರಾಯಚೂರು, ಕೊಡಗು, ಶಿವಮೊಗ್ಗ, ಯಾದಗಿರಿ, ಕಲಬುರಗಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಸೇನಾ ಕಾಲಮ್ ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ 4 ಹೆಲಿಕಾಪ್ಟರ್ ಮತ್ತು ಒಂದು ಗರುಡಾ ವಾಹನ ಕಾರ್ಯಾಚರಣೆಯಲ್ಲಿ ತೊಡಗಿವೆ.

Last Updated : Aug 13, 2019, 3:54 PM IST

ABOUT THE AUTHOR

...view details