ಬೆಂಗಳೂರು:ರಾಜ್ಯದ ಸಂಚಿತ ನಿಧಿಯಿಂದ 2021-22 ನೇ ಸಾಲಿನ ಹಣಕಾಸು ವರ್ಷಕ್ಕಾಗಿ 2,52,397.86 ಕೋಟಿ ರೂ.ಗಳಿಗೆ ಹೆಚ್ಚಾಗದಷ್ಟು ಮೊಬಲಗನ್ನು ಸಂದಾಯ ಮಾಡಲು ಅವಕಾಶ ನೀಡುವ ಕರ್ನಾಟಕ ಧನ ವಿನಿಯೋಗ ವಿಧೇಯಕ ಸಂಖ್ಯೆ 1ಕ್ಕೆ ವಿಧಾನಸಭೆಯಲ್ಲಿ ಇಂದು ಒಪ್ಪಿಗೆ ನೀಡಲಾಯಿತು.
ಕರ್ನಾಟಕ ಧನ ವಿನಿಯೋಗ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2021-22 ನೇ ಹಣಕಾಸು ವರ್ಷದ ಸೇವೆಗಳಿಗಾಗಿ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಮೊತ್ತ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಈ ವಿಧೇಯಕ ಮಂಡಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು. ಪ್ರಸಕ್ತ ಸಾಲಿನ ಬಜೆಟ್‍ಗೆ ಸದನ ಅನುಮೋದನೆ ನೀಡಬೇಕೆಂದು ಸಿಎಂ ನಿರ್ಣಯ ಮಂಡಿಸಿದರು.
ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕೋವಿಡ್ ಸಂಕಷ್ಟ, ಪ್ರವಾಹದ ಪರಿಸ್ಥಿತಿ ವಿವರಗಳನ್ನು ನೀಡಿ ಧನ ವಿನಿಯೋಗಕ್ಕೆ ಅನುಮೋದನೆ ನೀಡಬೇಕೆಂದು ಕೋರಿದರು. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆಯೇ ಈ ವಿಧೇಯಕಕ್ಕೆ ಸದನ ಧ್ವನಿಮತದಿಂದ ಅಂಗೀಕಾರ ನೀಡಿತು.
ಓದಿ:ಕಲಾಪದಲ್ಲಿ ಪಟ್ಟುಬಿಡದ ವಿಪಕ್ಷ: ತಜ್ಞರ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಹಣಿದ ಸಿಎಂ - VIDEO
ಇದೇ ವೇಳೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ತಿದ್ದುಪಡಿ ವಿಧೇಯಕ-2021, ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ-2021, ಪೂರಕ ಅಂದಾಜುಗಳ ಮೂರನೆ ಅಂತಿಮ ಬೇಡಿಕೆ ಪ್ರಸ್ತಾವನೆಗಳು-2020-21 ವಿಧೇಯಕಗಳನ್ನೂ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.