ಕರ್ನಾಟಕ

karnataka

ETV Bharat / state

ಹೆಚ್ಚೆಚ್ಚು ಸಾಲ, ಹೆಚ್ಚೆಚ್ಚು ತುಪ್ಪ!?; ಧನವಿನಿಯೋಗ, ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ.. - ಕರ್ನಾಟಕ ಧನವಿನಿಯೋಗ, ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚೆಯ ನಂತರ 2022 ನೇ ಸಾಲಿನ ಕರ್ನಾಟಕ ಧನವಿನಿಯೋಗ (ಸಂಖ್ಯೆ-2) ಕ್ಕೆ ವಿಧೇಯಕವನ್ನು ಮಂಡಿಸಿದಾಗ ಸದನ ಸರ್ವಾನುಮತದಿಂದ ಅಂಗೀಕರಿಸಿತು..

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Mar 29, 2022, 5:29 PM IST

ಬೆಂಗಳೂರು : ವಿವಿಧ ಇಲಾಖೆಗಳಿಗೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಹೆಚ್ಚುವರಿಯಾಗಿ ಅನುದಾನ ಕಲ್ಪಿಸಲು 2022ನೇ ಸಾಲಿನ ಕರ್ನಾಟಕ ಧನವಿನಿಯೋಗ (ಸಂಖ್ಯೆ-2)ಕ್ಕೆ ವಿಧಾನಸಭೆ (ಪೂರಕ ಬಜೆಟ್) ಅಂಗೀಕಾರ ನೀಡಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚರ್ಚೆಯ ನಂತರ ಈ ಸಂಬಂಧ ವಿಧೇಯಕವನ್ನು ಮಂಡಿಸಿದಾಗ ಸದನ ಸರ್ವಾನುಮತದಿಂದ ಅಂಗೀಕರಿಸಿತು.

ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

ಮಾರ್ಚ್ 4ರಂದು ಮಂಡಿಸಲಾಗಿದ್ದ ಮುಖ್ಯ ಬಜೆಟ್‍ಗೆ ಸದನ ಕಳೆದ ವಾರವೇ ಸಮ್ಮತಿ ನೀಡಿದೆ. ಇಂದು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಪೂರಕ ಬಜೆಟ್ (ಅಂದಾಜುಗಳ) ಅಂಗೀಕಾರ ಪ್ರಕ್ರಿಯೆಯಾಗಿತ್ತು. ಇವುಗಳಲ್ಲಿ ಕೃಷಿ, ನೀರಾವರಿ, ಲೋಕೋಪಯೋಗಿ, ಸಮಾಜ ಕಲ್ಯಾಣ, ಕಂದಾಯ, ಹಿಂದುಳಿದ ಕಲ್ಯಾಣ ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳಿಗೆ ಹೆಚ್ಚುವರಿಯಾಗಿ ಬಜೆಟ್ ಅನುದಾನ ಒದಗಿಸಲಾಗಿದೆ. ಪ್ರಸಕ್ತ ಪೂರಕ ಅಂದಾಜುಗಳ ಪ್ರಮಾಣ ಸುಮಾರು 27 ಸಾವಿರ ಕೋಟಿ ರೂ.ಗಳಷ್ಟಾಗಿದೆ.

ತೆರಿಗೆಯೇತರ ಬಾಬ್ತುಗಳಿಂದ 6 ಸಾವಿರ ಕೋಟಿ ಸಂಗ್ರಹ :ಕೋವಿಡ್ ನಡುವೆಯೂ ತೆರಿಗೆಯೇತರ ಮೂಲಗಳಿಂದ ಎರಡು ಸಾವಿರ ಕೋಟಿ ರೂ. ಹೆಚ್ಚು ಆದಾಯವನ್ನು ಕ್ರೋಢೀಕರಿಸುವ ಮೂಲಕ ಕರ್ನಾಟಕ ಗಮನ ಸೆಳೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸದನಕ್ಕೆ ತಿಳಿಸಿದರು. ವಿವಿಧ ಇಲಾಖಾವಾರು ಅನುದಾನದ ಮೇಲಿನ ಚರ್ಚೆಗೆ ಉತ್ತರಿಸಿ, ಎರಡನೇ ಧನವಿನಿಯೋಗಕ್ಕೆ ಒಪ್ಪಿಗೆ ಪಡೆಯುವ ಮುನ್ನ ಅವರು ಈ ವಿಷಯ ತಿಳಿಸಿದರು.

ತೆರಿಗೆಯೇತರ ಬಾಬ್ತುಗಳಿಂದ 4 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಕಳೆದ ವರ್ಷ ಹೊಂದಲಾಗಿತ್ತು. ಇದನ್ನು ಮೀರಿ 6 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಆರ್ಥಿಕತೆ ಆರೋಗ್ಯಕರವಾಗಿ ಇರಬೇಕಾದರೆ ತೆರಿಗೆಯೇತರ ಆದಾಯ ಹೆಚ್ಚಾಗಿರಬೇಕಾಗುತ್ತದೆ. ತೆರಿಗೆಯ ಹೊರತಾದ ಆದಾಯ ಮೂಲಗಳು ಹೆಚ್ಚುತ್ತಲೇ ಹೋಗಬೇಕೆಂಬುದು ನಮ್ಮ ಸ್ಪಷ್ಟ ನಿಲುವು. ಆದ್ದರಿಂದ 2022-23ನೇ ಸಾಲಿನಲ್ಲಿ ಈ ಆದಾಯ ಮೂಲವನ್ನು ಇನ್ನಷ್ಟು ಹೆಚ್ಚಿಸಿ 10 ಸಾವಿರ ಕೋಟಿ ರೂ.ನಷ್ಟು ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ ಸಾಲಿಗಿಂತ ಶೇ.7.9ರಷ್ಟು ಹೆಚ್ಚಿನ ಗಾತ್ರದ ಬಜೆಟ್ ಮಂಡನೆ : ಕೋವಿಡ್ ಹಿನ್ನೆಲೆಯಲ್ಲಿ ಬಜೆಟ್ ಗಾತ್ರ ಕುಗ್ಗುತ್ತದೆ ಎಂಬುದಾಗಿ ಅನೇಕರು ನಿರೀಕ್ಷಿಸಿದ್ದರು. ಕೆಲವು ಅಧಿಕಾರಿಗಳೂ ಗಾತ್ರವನ್ನು ಕುಗ್ಗಿಸುವುದು ಸೂಕ್ತ ಎಂಬ ಸಲಹೆಯನ್ನು ನೀಡಿದ್ದರು. ಆದರೆ, ಕಳೆದ ಸಾಲಿಗಿಂತ ಶೇ.7.9ರಷ್ಟು ಹೆಚ್ಚಿನ ಗಾತ್ರದ ಬಜೆಟ್ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಬಜೆಟ್‍ನ ಎಲ್ಲ ಘೋಷಣೆಗಳನ್ನು ಖಂಡಿತವಾಗಿ ಅನುಷ್ಟಾನ ಮಾಡುತ್ತೇವೆ ಎಂದು ಹೇಳಿದರು.

ಬಜೆಟ್ ಗಾತ್ರ ಹಿಗ್ಗಿಸಿ, ಸಾಲ ಪ್ರಮಾಣದಲ್ಲಿ ಏರಿಕೆ ಮಾಡಿಕೊಂಡಿದ್ದಾಗ್ಯೂ ಕೂಡ ರಾಜ್ಯ ಸರ್ಕಾರ ವಿತ್ತೀಯ ಶಿಸ್ತು ಅಧಿನಿಯಮವನ್ನು (ಆರ್ಥಿಕ ಶಿಸ್ತು ಕಾಪಾಡುವ ಕಾಯ್ದೆ) ಮೀರಿಲ್ಲ ಎಂಬುದು ಗಮನಾರ್ಹ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಪ್ರಶ್ನೆಗಳಿಗೆ ವಿವರಣೆ ನೀಡಿದರು.

4 ಸಾವಿರ ಕೋಟಿ ರೂ. ಕಡಿಮೆ ಸಾಲ : ರಾಜ್ಯಕ್ಕೆ 63 ಸಾವಿರ ಕೋಟಿ ರೂಪಾಯಿ ಸಾಲ ಮಾಡುವ ಅವಕಾಶ ಇತ್ತಾದರೂ, ಈ ಪ್ರಮಾಣಕ್ಕಿಂತ 4 ಸಾವಿರ ಕೋಟಿ ರೂ. ಕಡಿಮೆ ಸಾಲ ಮಾಡಲಾಗಿದೆ. ಇದರೊಂದಿಗೆ ಆರ್ಥಿಕ ಶಿಸ್ತು ಕಾಯ್ದೆಯನ್ನು ಉಲ್ಲಂಘಿಸದೇ ಆರ್ಥಿಕತೆಯನ್ನು ಹಳಿ ತಪ್ಪದಂತೆ ನೋಡಿಕೊಳ್ಳಲಾಗಿದೆ ಎಂದರು.

ಆರ್ಥಿಕ ಶಿಸ್ತು ಹದಗೆಟ್ಟಿದೆ ಎಂಬ ಸಿದ್ದರಾಮಯ್ಯನವರ ಮಾತನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಸಿಎಂ, ಕೋವಿಡ್ ವರ್ಷದಲ್ಲಿ ರಾಜಸ್ವ ಸಂಗ್ರಹದಲ್ಲಿ ಅಂದುಕೊಂಡಷ್ಟು ಹಿಂದೆ ಬಿದ್ದಿಲ್ಲ ಎಂದು ನುಡಿದರು. ಕೇವಲ 6 ಸಾವಿರ ಕೋಟಿಯಷ್ಟು ತೆರಿಗೆ ಸಂಗ್ರಹ ಕಡಿಮೆಯಾಗಿದೆ ಎಂದರು. ಸಾಲ ಮಾಡಿ, ಸಾಲ ಮಾಡದೇ ರಾಜ್ಯವನ್ನು ನಡೆಸುವುದು ಸಾಧ್ಯವಿಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ ಆರ್ಥಿಕ ಶಿಸ್ತನ್ನು ಮೀರಬಾರದು ಎಂದು ಸಿದ್ದರಾಮಯ್ಯ ಹೇಳಿದರು.

ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ ಅಂಗೀಕಾರ : ರಾಜ್ಯದ ಸಾಲ ಮಾಡುವ ಪ್ರಮಾಣವನ್ನು ಹೆಚ್ಚಿಸಲು ಸಮ್ಮತಿ ನೀಡುವ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ಕಾಯ್ದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಧೇಯಕವನ್ನು ಮಂಡಿಸಿದರು.

ಆರ್ಥಿಕ ಹೊಣೆಗಾರಿಕೆ ಕಾಯ್ದೆಯ ಪ್ರಕಾರ ಈ ಮೊದಲು ವಾರ್ಷಿಕ ಸಾಲದ ಪ್ರಮಾಣ ಆರ್ಥಿಕತೆಯ ಶೇ.3ರಷ್ಟು ಮೀರುವಂತೆ ಇರಲಿಲ್ಲ. ತಿದ್ದುಪಡಿಯಿಂದಾಗಿ ಈಗ ಶೇ.5ರಷ್ಟು ಸಾಲಕ್ಕೆ ಅವಕಾಶವಿದೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದರೂ ಕೂಡ ವಿತ್ತೀಯ ಶಿಸ್ತು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು.

ತೆರಿಗೆ ಹೊರತಾದ ಮೂಲಗಳಿಂದ ಆದಾಯ ಸಂಗ್ರಹಿಸಲು ಹಾಕಿಕೊಂಡಿರುವ ಗುರಿಯನ್ನು ಕ್ರಮಿಸಲಾಗುವುದು. ಜಿಎಸ್‍ಟಿ ವಿಷಯದಲ್ಲಿ ಕಳ್ಳಾಟ ನಡೆಯದಂತೆ ಬಿಗಿ ಮಾಡಿ ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡಲಾಗುವುದು ಎಂದು ಸದನಕ್ಕೆ ತಿಳಿಸಿದರು. ನಂತರ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕ-2022 ಅಂಗೀಕಾರಗೊಂಡಿತು.

For All Latest Updates

TAGGED:

ABOUT THE AUTHOR

...view details