ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೊರತೆಯಾಗಿದ್ದ ಸಿನಿಮಾ ಪತ್ರಕರ್ತರ ಕುಂದು ಕೊರತೆಯ ಬಗ್ಗೆ ಧ್ವನಿ ಎತ್ತುವ ಒಂದು ವೇದಿಕೆ ಹಾಗೂ ಸಂಘ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಸಿನಿಮಾ ಪತ್ರಕರ್ತರ ಪರ ಧ್ವನಿಯಾಗಿ ಕೆಲಸ ಮಾಡಲು ಸ್ಯಾಂಡಲ್ವುಡ್ನಲ್ಲಿ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆರಂಭಗೊಂಡಿದೆ. ಈ ಸಂಘದಿಂದ ಸಿನಿಮಾ ಪತ್ರಕರ್ತರ ಅಭಿಲಾಷೆಗಳನ್ನು, ಅವರ ಮನವಿಗಳನ್ನು ಸರ್ಕಾರಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಂದನವನದ ಇತರ ಸಂಸ್ಥೆಗಳಿಗೆ ತಲುಪಿಸುವಲ್ಲಿ ಈ ಸಂಘ ಬದ್ಧವಾಗಿದೆ. ಈ ಸಂಘವನ್ನ ಪದ್ಮಶ್ರೀ ಡಾ.ಗಿರೀಶ್ ಕಾಸರವಳ್ಳಿ ಹಾಗೂ ಡಾ.ವಿಜಯಮ್ಮ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಯಿತು.
ಇತಿಹಾಸವನ್ನು ರಾಷ್ಟ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವ ಅಗತ್ಯವಿದೆ: ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘವನ್ನು ಉದ್ಘಾಟಿಸಿ, ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಡಾ.ಗಿರೀಶ್ ಕಾಸರವಳ್ಳಿ, ಕನ್ನಡದ ಒಟ್ಟು ಸಿನಿಮಾ ಬೆಳವಣಿಗೆ, ಇತಿಹಾಸವನ್ನು ರಾಷ್ಟ್ರೀಯ ನೆಲೆಯಲ್ಲಿ ವಿಶ್ಲೇಷಣೆ ಮಾಡುವುದು ತುರ್ತು ಅಗತ್ಯವಿದೆ. ಇನ್ನು ಸಂಸ್ಕಾರ, ಸ್ಕೂಲ್ ಮಾಸ್ಟರ್ ರೀತಿಯ ಚಿತ್ರಗಳನ್ನು ಸರಿಯಾಗಿ ಬಿಂಬಿಸುವ ಕೆಲಸ ಆಗಿಲ್ಲ.
ರೌಡಿಸಂ ಮಾದರಿಯ ಸಿನಿಮಾಗಳನ್ನು ಹೆಚ್ಚು ಹೆಚ್ಚು ಪ್ರೊಜೆಕ್ಟ್ ಮಾಡಿ ರಾಜ್ಯದ ಹೊರಗೂ ಕನ್ನಡ ಚಿತ್ರಗಳ ಕುರಿತಂತೆ ನಾವೇ ತಪ್ಪು ಕಲ್ಪನೆ ಮೂಡಿಸಿದ್ದೇವೆ, ಅದನ್ನು ಹೋಗಲಾಡಿಸುವ ಅಗತ್ಯವಿದೆ. ಇದರ ಜೊತೆಗೆ ಕನ್ನಡದ ಅಸ್ಮಿತೆ, ಕಲಾತ್ಮಕ ಹೆಗ್ಗಳಿಕೆ ತೋರಿಸುವ ಕೆಲಸ ಆಗಬೇಕು. ಬೆಂಗಳೂರು ಅಲ್ಲದೆ ರಾಜ್ಯದ ಆಚೆಗೂ ಕನ್ನಡದಲ್ಲಿ ಈ ರೀತಿ ಸಾಧನೆ ಆಗಿದೆ ಎನ್ನುವುದು ತಿಳಿಸಬೇಕು' ಎಂದು ಅವರು ಸಲಹೆ ನೀಡಿದರು.
ಸಿನಿಮಾ ಶೂನ್ಯದಲ್ಲಿ ಸೃಷ್ಠಿ ಆಗುವುದಿಲ್ಲ: ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ಪ್ರೊಜೆಕ್ಟ್ ಮಾಡುತ್ತಿಲ್ಲ. 'ಕಾಂತಾರ ' ತನ್ನ ಅಸ್ಮಿತೆಯಿಂದ ದೇಶವಿದೇಶಗಳಲ್ಲಿ ಯಶಸ್ಸು ಗಳಿಸಿತು. ಆದರೆ 'ಕೆಜಿಎಫ್' ಹಾಗಲ್ಲ, ಅದರ ಗೆಲುವಿಗೆ ಬೇರೆಯದೇ ಆದ ಕಾರಣ ಇದೆ. ಕನ್ನಡದಲ್ಲಿ ಬೇರೆಯೇ ರೀತಿಯ ಚಿತ್ರಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ಆಗಿದೆ. 'ಬಳೆ ಕೆಂಪ', 'ಪಿಂಕಿ ಎಲ್ಲಿ', 'ನಾನು ಕುಸುಮ', 'ಪೆದ್ರೋ', 'ಶಿವಮ್ಮ' ಮುಂತಾದ ಚಿತ್ರಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಅವುಗಳು ಜನರಿಗೆ ತಲುಪುತ್ತಿಲ್ಲ ಎಂದರು.