ಬೆಂಗಳೂರು:ಕೊರೊನಾ ಎರಡನೇ ಅಲೆಯಿಂದ ಇಡೀ ದೇಶವೇ ತತ್ತರಿಸಿದೆ. ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿದ್ದರೆ, ಸಾವಿರಾರು ಜನರು ಹೆಮ್ಮಾರಿಗೆ ಪ್ರಾಣ ಬಿಟ್ಟಿದ್ದಾರೆ. ಇದರ ಎಫೆಕ್ಟ್ ಕನ್ನಡ ಚಿತ್ರರಂಗದ ಮೇಲೆ ಜಾಸ್ತಿನೇ ಆಗಿದೆ. ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಅಪಾರ ಅಭಿಮಾನಿ ಬಳಗ ಹೊಂದಿದ್ದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಹಿರಿಯ ಪೋಷಕ ಕಲಾವಿದರು ಹಾಗು ಸಾಹಿತಿಗಳು ಸೇರಿದಂತೆ ಕೆಲ ಸಿನಿಮಾದವರು ಕೊರೊನಾಗೆ ಬಲಿಯಾಗಿದ್ದಾರೆ. ಹೀಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಗಲಿದ ಗಣ್ಯರಿಗೆ ಗುರು ರಾಜ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಶ್ರದ್ಧಾಂಜಲಿ ಓದಿ: 'ನೀವು ಒರಿಜಿನಲ್ ಬಿಜೆಪಿಗರಾ, ಬಿಎಸ್ವೈ ಬಗ್ಗೆ ಮಾತನಾಡುವ ನೈತಿಕತೆ ನಿಮಗೇನಿದೆ?'
ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಕೋಟಿ ರಾಮು, ಕೆ.ಸಿ.ಎನ್. ಚಂದ್ರಶೇಖರ್, ಅಣ್ಣಯ್ಯ ಚಿತ್ರದ ನಿರ್ಮಾಪಕ ಚಂದ್ರಶೇಖರ್, ನಟರಾದ ಸಂಚಾರಿ ವಿಜಯ್, ಶಂಖನಾದ ಅರವಿಂದ್, ಸುರೇಶ್ ಚಂದ್ರ, ನಟಿ ಬಿ. ಜಯಮ್ಮ, ನಿರ್ದೇಶಕರಾದ ತಿಪಟೂರು ರಘು, ರೇಣುಕಾ ಶರ್ಮಾ, ಸಾಹಿತಿಗಳಾದ ಸಿದ್ದಲಿಂಗಯ್ಯ, ಹೆಚ್. ಎಸ್. ದೊರೆಸ್ವಾಮಿ ಸೇರಿದಂತೆ ಬರೋಬ್ಬರಿ 47 ಜನ ಸಿನಿಮಾದವರು ಈ ಕೊರೊನಾ ಸಂದರ್ಭದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಹೀಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಗಲಿದ ಗಣ್ಯರಿಗೆ, ಗುರುರಾಜ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನ, ಎಲ್ಇಡಿ ಟಿವಿಯಲ್ಲಿ ಫೋಟೋಗಳನ್ನ ಪ್ರದರ್ಶನ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಕಾರ್ಯಕ್ರಮಕ್ಕೆ ಹಿರಿಯ ನಟ ಶಿವರಾಜ್ ಕುಮಾರ್, ನಟಿಯರಾದ ತಾರಾ ಅನುರಾಧ, ಜಯಮಾಲಾ ಹಾಗು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಗೌರವ ಕಾರ್ಯದರ್ಶಿ ಎಂ.ಎನ್. ಸುರೇಶ್, ಉಪಾಧ್ಯಕ್ಷ ನಾಗಣ್ಣ, ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರುಗಳಾದ ಸಾರಾ ಗೋವಿಂದು, ಕೆ.ವಿ. ಚಂದ್ರಶೇಖರ್, ಚಿನ್ನೇಗೌಡರು, ನಿರ್ಮಾಪಕರ ಸಂಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ವಿತರಕರು, ಪ್ರದರ್ಶಕರು ಸೇರಿದಂತೆ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಹಾಗು ಅಗಲಿದ ಗಣ್ಯರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.