ಕರ್ನಾಟಕ

karnataka

ETV Bharat / state

ಕೊರೊನಾ ಅಬ್ಬರದ ನಡುವೆ ಖಾಲಿಯಾಗುತ್ತಿರುವ ಲಸಿಕೆ: ವ್ಯಾಕ್ಸಿನ್​ ಪೂರೈಕೆಯಲ್ಲಿ ಮಂದಗತಿ? - covid-19 vaccine shortage in the time of pandemic

ಆಕ್ಸಿಜನ್ ನೀಡಿಕೆ ಬಗ್ಗೆ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದನ್ನು ಸ್ವಾಗತಿಸುತ್ತೇನೆ. ಪ್ರಸ್ತುತ ಆಕ್ಸಿಜನ್ ತುಂಬಾ ಅಗತ್ಯ ಇದೆ. ಕೇಂದ್ರ ಸರ್ಕಾರಕ್ಕೆ ನಾವೂ ಸಹ ಮನವಿ ಮಾಡಿದ್ದೇವೆ ..

karnataka-faces-covid-19-vaccine-shortage-in-the-time-of-pandemic
ಆರೋಗ್ಯ ಸಚಿವ ಡಾ.ಕೆ ಸುಧಾಕರ್

By

Published : May 7, 2021, 8:12 PM IST

ಬೆಂಗಳೂರು :ಒಂದೆಡೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಲಸಿಕಾ ಕೇಂದ್ರದ ಬಳಿ ನೋ ಸ್ಟಾಕ್ (ಖಾಲಿಯಾಗಿದೆ) ನಾಳೆ ಬನ್ನಿ ಎಂಬ ಸಿದ್ಧ ಉತ್ತರ ಎದುರಾಗುತ್ತಿದೆ.

ಲಸಿಕೆ ಹಾಕಿಸಿಕೊಳ್ಳಲು ಮೊದಲು ಹಿಂಜರಿದ ಜನರು ಈಗ ಕೊರೊನಾ ಲಸಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ. ಆದರೆ, ಲಸಿಕಾ ಕೇಂದ್ರಗಳಲ್ಲಿ ಡೋಸ್ ಕೊರತೆ ಕಂಡು ಬಂದಿದ್ದು, ಸ್ಟಾಕ್ ಇಲ್ಲ ಎಂಬ ಉತ್ತರ ಸಿಗುತ್ತಿದೆ.

ರಾಜ್ಯದಲ್ಲಿ 60 ವರ್ಷ ವಯೋಮಾನದವರು 35.64 ಲಕ್ಷ ಜನರು ಮೊದಲ ಡೋಸ್‌ ಹಾಕಿಸಿಕೊಂಡಿದ್ದು, ಇದರ ಪೈಕಿ 8.23 ಲಕ್ಷ ಜನ ಮಾತ್ರ ಎರಡನೇ ಡೋಸ್‌ ಹಾಕಿಸಿಕೊಂಡಿದ್ದಾರೆ.

44ರಿಂದ 59ರ ವಯೋಮಾನದ 36.38 ಲಕ್ಷ ಜನರು ಈಗಾಗಲೇ ಮೊದಲ ಡೋಸ್‌ ಹಾಕಿಸಿಕೊಂಡಿದ್ದು, ಅವರಲ್ಲಿ 3.16 ಲಕ್ಷ ಜನ ಮಾತ್ರ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ. ಈವರೆಗೆ ರಾಜ್ಯದಲ್ಲಿ ಸುಮಾರು 1 ಕೋಟಿ ಜನ ಕೊರೊನಾ ಲಸಿಕೆ ಪಡೆದಿದ್ದಾರೆ.

ಕೊರೊನಾ ಲಸಿಕೆ ದಾಸ್ತಾನಿನ ಕೊರತೆಯು ಕೇವಲ‌ 18-44 ವರ್ಷದವರ ಲಸಿಕೆ ಅಭಿಯಾನಕ್ಕೆ ಹಿನ್ನಡೆ ಉಂಟು ಮಾಡಿಲ್ಲ. ಎರಡನೇ ಡೋಸ್ ಪಡೆಯಬೇಕಿದ್ದವರಿಗೂ ಕೂಡ ಸಮಸ್ಯೆ ಉಂಟಾಗಿದೆ.

ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರು 28 ದಿನಗಳ ನಂತರ ಎರಡನೇ ಡೋಸ್, ಕೋವಿಶೀಲ್ಡ್ ಮೊದಲ ಡೋಸ್ ಪಡೆದವರು 6 ವಾರಗಳ ನಂತರ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು.

ಲಸಿಕೆ ಕೊರತೆ ಕುರಿತಂತೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯೆ..

ಪ್ರಸ್ತುತ ರಾಜ್ಯದಲ್ಲಿ ಹಿರಿಯರು ಮತ್ತು ಆರೋಗ್ಯ ಸಮಸ್ಯೆ ಹೊಂದಿದವರು ಮೊದಲ ಡೋಸ್ ಪಡೆದು ಆರು ವಾರ ಕಳೆದಿದ್ದು, ಎರಡನೇ ಡೋಸ್ ಶೀಘ್ರ ನೀಡಬೇಕಿದೆ. ಅಲ್ಲದೆ, 45-59 ವರ್ಷದವರು ಮೊದಲ ಡೋಸ್ ಲಸಿಕೆ ಪಡೆದು ಐದು ವಾರ ಪೂರ್ಣಗೊಂಡಿದೆ.

ಇವರಿಗೆ ಮುಂದಿನ ವಾರಾಂತ್ಯದಲ್ಲಿ ಎರಡನೇ ಡೋಸ್ ಲಸಿಕೆ ಹಾಕಬೇಕಿದೆ. ಆದರೆ, ಕೇಂದ್ರ ಸರ್ಕಾರದಿಂದ ಅಗತ್ಯ ಪ್ರಮಾಣದಲ್ಲಿ ಲಸಿಕೆ ಸಿಗದ ಕಾರಣ ಎರಡನೇ ಡೋಸ್‌ಗೂ ದಾಸ್ತಾನು ಕೊರತೆ ಎದುರಾಗಿದೆ.

ಪ್ರಸ್ತುತ 5.75 ಲಕ್ಷ ಕೋವಿಶೀಲ್ಡ್ ಲಸಿಕೆ ಇದೆ. ಕೋವ್ಯಾಕ್ಸಿನ್‌ ಕೇವಲ 30 ಸಾವಿರ ಡೋಸ್‌ ಮಾತ್ರ ಇದೆ. ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರದ ಜನ ಈಗ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ ಎಂದು ಲಸಿಕಾ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ.

15 ಲಕ್ಷ ಡೋಸ್‌ ಲಸಿಕೆ ಬರುವ ನಿರೀಕ್ಷೆ : ಕೊರೊನಾ ಲಸಿಕೆ ಅಭಾವದಿಂದ 18 ರಿಂದ 44 ವರ್ಷದವರಿಗೆ ಲಸಿಕೆ ನೀಡುವ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಮೇ 2ನೇ ವಾರದಲ್ಲಿ 15 ಲಕ್ಷ ಡೋಸ್‌ ಲಸಿಕೆ ಬರುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

18 ರಿಂದ 44 ವರ್ಷ ವಯಸ್ಸಿನವರಿಗೆ ರಾಜ್ಯ ಸರ್ಕಾರ ಲಸಿಕೆ ಖರೀದಿಸಿ ಉಚಿತವಾಗಿ ನೀಡಲು ನಿರ್ಧರಿಸಿ, ಈ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮೇ 1ರಂದು ಚಾಲನೆ ನೀಡಿದ್ದರು.

ಆದರೆ, ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆಗೂ ಮೊದಲೇ ಅವರು ತರಾತುರಿಯಲ್ಲಿ ಚಾಲನೆ ನೀಡಿರುವುದು ಸಮಸ್ಯೆಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

18 ವರ್ಷ ದಾಟಿದವರಿಗೆ ಲಸಿಕೆ ನೀಡುವ ಉದ್ದೇಶದಿಂದ 2 ಕೋಟಿ ಡೋಸ್‌ ಕೋವಿಶೀಲ್ಡ್‌ ಖರೀದಿಗೆ ವಾರದ ಹಿಂದೆಯೇ ಉತ್ಪಾದಕ ಕಂಪನಿಗೆ ಸರ್ಕಾರ ಹಣ ಪಾವತಿಸಿದೆ.

ಆದರೆ, ಇದುವರೆಗೆ ಕೇವಲ 3 ಲಕ್ಷ ಮಾತ್ರ ಸರಬರಾಜು ಆಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಮಾತ್ರ 18 ರಿಂದ 44 ವರ್ಷದ 5,136 ಜನರಿಗೆ ಲಸಿಕೆ ಹಾಕಲಾಗಿದೆ.

ಸದ್ಯ ದಾಸ್ತಾನು ಲಭ್ಯವಿರುವ ಕಡೆಗಳಲ್ಲಿ ಹೊಸಬರಿಗೆ ಅಥವಾ ಮೊದಲ ಡೋಸ್ ಪಡೆಯುವರಿಗಿಂತಲೂ ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.

ಸಾರ್ವಜನಿಕರು ಕೂಡ ಎರಡನೇ ಡೋಸ್ ಪಡೆಯುವವರಿಗೆ ಅವಕಾಶ ಮಾಡಿಕೊಡಬೇಕು ಎಂದು ಆರೋಗ್ಯ ಇಲಾಖೆ ಲಸಿಕೆ ವಿಭಾಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಗಾಬರಿಪಡುವ ಅಗತ್ಯ ಇಲ್ಲ : ತಿಂಗಳಲ್ಲಿ 40 ಲಕ್ಷ ಮಂದಿಗೆ ಎರಡನೇ ಡೋಸ್ ಲಸಿಕೆ ಬೇಕಿದೆ. ಮಾರ್ಚ್ ಮತ್ತು ಏಪ್ರಿಲ್ 15ರವರೆಗೆ ಪಡೆದವರು ಈ ತಿಂಗಳಲ್ಲಿ ಎರಡನೇ ಡೋಸ್ ಲಸಿಕೆ ಪಡೆಯಬೇಕಿದೆ.

ಈ ಹಿಂದೆ 28 ದಿನ ನಂತರ ಎರಡನೇ ಡೋಸ್ ಎಂದಿತ್ತು. ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಾರ, ಕೋವಿಶೀಲ್ಡ್ ಪಡೆದವರು 6ರಿಂದ 8 ವಾರದ ಒಳಗೆ 2ನೇ ಡೋಸ್ ಪಡೆಯಬೇಕು. ಆರು ವಾರ ಪೂರ್ಣಗೊಂಡವರಿಗೆ ಇನ್ನೂ ಸಮಯವಿದೆ.

ರಾಜ್ಯದಲ್ಲಿ ಶೇ. 90 ಕ್ಕೂ ಹೆಚ್ಚು ಕೋವಿಶೀಲ್ಡ್ ವಿತರಿಸಲಾಗಿದೆ. ಗಾಬರಿಪಡುವ ಅಗತ್ಯ ಇಲ್ಲ ಎಂದು ಲಸಿಕಾ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

ಎರಡು-ಮೂರು ದಿನಗಳಲ್ಲಿ ಪೂರೈಕೆಯಾಗುವ ನಿರೀಕ್ಷೆ : ಮುಂದಿನ ವಾರದಲ್ಲಿ ಸುಮಾರು 6 ರಿಂದ 7 ಲಕ್ಷ ಕೋವಿಶೀಲ್ಡ್‌ ಕಳುಹಿಸುವುದಾಗಿ ಕಂಪನಿಯವರು ಭರವಸೆ ನೀಡಿದ್ದಾರೆ. ಕೋವ್ಯಾಕ್ಸಿನ್‌ಗೆ 400 ರೂ., ಕೋವಿಶೀಲ್ಡ್‌ಗೆ 300 ರೂ. ದರ ನೀಡಿ ಸರ್ಕಾರ ಖರೀದಿಸುತ್ತಿದೆ.

45 ವರ್ಷ ದಾಟಿದವರಿಗೆ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ 5 ಲಕ್ಷ ಕೋವಿಶೀಲ್ಡ್‌ ಪೂರೈಸಿದೆ. ಜಿಲ್ಲೆಗಳಲ್ಲಿ ಈಗಾಗಲೇ ಲಸಿಕೆ ಪಡೆದವರ ಸರಾಸರಿ ಆಧರಿಸಿ, ಬಂದ ಡೋಸ್‌ಗಳನ್ನು ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಕೋವ್ಯಾಕ್ಸಿನ್‌ ಲಸಿಕೆ ಎರಡು-ಮೂರು ದಿನಗಳಲ್ಲಿ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಕ್ಸಿನ್ ಸಂಬಂಧ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ರಾಜ್ಯದಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ಕೊರೊನಾ ಲಸಿಕೆ ವಿಳಂಬ ಮಾಡುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ದೂರುವುದು ಬೇಡ.

ಲಸಿಕೆ ಉತ್ಪಾದನೆ ಮಾಡುವ ಕಂಪೆನಿಗಳ ಲಸಿಕೆ ಸರಬರಾಜು ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದ ಅವರು, ಒಂದು ವಾರದಲ್ಲಿ 12 ಲಕ್ಷ ಡೋಸ್ ಪಡೆದಿದ್ದಾರೆ. ಎರಡನೇ ಡೋಸ್ ಕೊಡಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.

ಆಕ್ಸಿಜನ್ ನೀಡಿಕೆ ಬಗ್ಗೆ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದನ್ನು ಸ್ವಾಗತಿಸುತ್ತೇನೆ. ಪ್ರಸ್ತುತ ಆಕ್ಸಿಜನ್ ತುಂಬಾ ಅಗತ್ಯ ಇದೆ. ಕೇಂದ್ರ ಸರ್ಕಾರಕ್ಕೆ ನಾವೂ ಸಹ ಮನವಿ ಮಾಡಿದ್ದೇವೆ ಎಂದರು.

ಓದಿ:ಖಾಸಗಿ ಆಸ್ಪತ್ರೆಗಳು ಕಣ್ಣಾ ಮುಚ್ಚಾಲೇ ಆಟ ಬಿಟ್ಟು ಸರ್ಕಾರಕ್ಕೆ ನೀಡಬೇಕಾದ ಬೆಡ್ ಕೊಡಿ : ಸಚಿವ ಅಶೋಕ್ ಎಚ್ಚರಿಕೆ

ABOUT THE AUTHOR

...view details