ಬೆಂಗಳೂರು: ಕರ್ನಾಟಕದಲ್ಲಿ ಬಿರುಸಿನ ಮತ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಟೀಕಾಸಮರ ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ #ManeMagaModi ಎಂಬ ಹ್ಯಾಶ್‌ಟ್ಯಾಗ್ ಹೆಚ್ಚು ಟ್ರೆಂಡಿಂಗ್ ಆಗುತ್ತಿದೆ. ಹ್ಯಾಶ್‌ಟ್ಯಾಗ್‌ಗಳ ಹೊರತಾಗಿ ಕರ್ನಾಟಕದಲ್ಲಿ ಮೋದಿ ಪ್ರಚಾರದ ಅನೇಕ ಚಿತ್ರಗಳನ್ನು ಬಿಜೆಪಿ ನಾಯಕರು ತಮ್ಮ ತಮ್ಮ ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಪ್ರಧಾನಿಯನ್ನು 'ಕರ್ನಾಟಕದ ಮಗ' ಎಂದು ಹೇಳಿಕೊಂಡಿದ್ದಾರೆ.
ಕಳೆದೆರಡು ದಿನಗಳಿಂದ ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡಿರುವ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಪರ ಯಾಚಿಸುತ್ತಿದ್ದು #ManemagaModi ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಮತಬೇಟೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಅವರು, ಪಕ್ಷವು ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕನ್ನಡದಲ್ಲಿ 'ಮನೆಮಗಮೋದಿ' ಎಂದರೆ 'ನಮ್ಮ ನಾಯಕ' ಎಂದರ್ಥ. ಇದು ಕರ್ನಾಟಕದ ನಾಯಕ ಅಥವಾ 'ಮಣ್ಣಿನ ಮಗ' ಎಂಬ ಅರ್ಥವನ್ನೂ ಕೂಡಾ ನೀಡುತ್ತದೆ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ನಾಯಕರು ಮತ್ತು ಇತರ ನಾಯಕರು 'ಮನೆಮಗಮೋದಿ' ಪೋಸ್ಟ್‌ಗಳೊಂದಿಗೆ ಟ್ವಿಟರ್‌ನಲ್ಲಿ ಪ್ರವಾಹ ಹರಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಜನರು ಮೋದಿ ಅವರನ್ನು ನೋಡಲು ಮತ್ತು ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಎಂದು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ. ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಹಲವು ಹಗರಣಗಳು ನಡೆದಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟ್ ಮಾಡಿದ್ದಾರೆ.