ಕರ್ನಾಟಕ

karnataka

ETV Bharat / state

2ನೇ ಪಟ್ಟಿಯಲ್ಲಿ ಅನ್ಯ ಪಕ್ಷದ ಅತೃಪ್ತರಿಗೆ ಜೆಡಿಎಸ್ ಮಣೆ: ಅಂತಿಮ ಪಟ್ಟಿಗೆ ವಲಸಿಗರತ್ತ ಚಿತ್ತ! - ಜೆಡಿಎಸ್ 49 ಅಭ್ಯರ್ಥಿಗಳ 2ನೇ ಪಟ್ಟಿ

Karnataka assembly elections 2023: ಅತೃಪ್ತರಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ಕಾಂಗ್ರೆಸ್​ - ಬಿಜೆಪಿಗೆ ಪೈಪೋಟಿ ನೀಡಲು ಮುಂದಾಗಿದೆ

JDS Leaders
ಜೆಡಿಎಸ್​​ ನಾಯಕರು

By

Published : Apr 15, 2023, 6:46 AM IST

ಬೆಂಗಳೂರು:ಜೆಡಿಎಸ್ 50 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಸನ ಕ್ಷೇತ್ರದ ಟಿಕೆಟ್ ಘೋಷಿಸುವ ಮೂಲಕ ಟಿಕೆಟ್ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. 2ನೇ ಟಿಕೆಟ್ ಪಟ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್ ಟಿಕೆಟ್ ಸಿಗದೇ ಪಕ್ಷ ತೊರೆದ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.

ರೆಬೆಲ್ ಅಭ್ಯರ್ಥಿಗಳಿಗೆ ಮಣೆ:ಈ ಮೊದಲು 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್​​ಗೆ ಹಾಸನ ಟಿಕೆಟ್ ಕಗ್ಗಂಟಾಗಿದ್ದರಿಂದ 2ನೇ ಪಟ್ಟಿ ಬಿಡುಗಡೆ ತಡವಾಗಿದೆ.‌ ಇದೀಗ 50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೂಲಕ ಜೆಡಿಎಸ್ ಈವರೆಗೆ ಒಟ್ಟು 143 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಇನ್ನೂ 81 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿದೆ. ಆದರೆ, ಶುಕ್ರವಾರ ಬಿಡುಗಡೆ ಮಾಡಿದ 2ನೇ ಪಟ್ಟಿಯಲ್ಲಿ ಜೆಡಿಎಸ್ ರಾಷ್ಟ್ರೀಯ ಪಕ್ಷದ ರೆಬೆಲ್ ಅಭ್ಯರ್ಥಿಗಳಿಗೆ ಮಣೆಹಾಕಿದೆ.

ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿರುವ ಮಾಜಿ ಸಚಿವ ಎ.ಮಂಜುಗೆ ಅರಕಲಗೂಡು ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ತೊರೆದಿರುವ ಮನೋಹರ್ ತಹಶೀಲ್ದಾರ್‌ಗೆ ಹಾನಗಲ್ ಕ್ಷೇತ್ರದಿಂದ ಮತ್ತು ಹಳಿಯಾಳ ಕ್ಷೇತ್ರಕ್ಕೆ ಎಸ್.ಎಲ್.ಘೊಟ್ನೇಕರ್‌ಗೆ ಅವಕಾಶ ನೀಡಲಾಗಿದೆ. ಶುಕ್ರವಾರವಷ್ಟೇ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ಅವರಿಗೆ ಜೇವರ್ಗಿ ಕ್ಷೇತ್ರದಿಂದ ಹಾಗೂ ಶಹಾಪುರ ಕ್ಷೇತ್ರದಿಂದ ಗುರುಲಿಂಗಪ್ಪಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

ಇನ್ನು ಬಿಜೆಪಿಯಿಂದ ವಲಸೆ ಬಂದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರಿಗೆ ಹುಬ್ಬಳ್ಳಿ - ಧಾರವಾಡ ಪೂರ್ವ ಮೀಸಲು ಕ್ಷೇತ್ರದ ಟಿಕೆಟ್ ಲಭಿಸಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ಆನಂದಪ್ಪ ಅವರಿಗೆ ಮಾಯಕೊಂಡ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿದೆ. ಇನ್ನು ಕಾಂಗ್ರೆಸ್ ಟಿಕೆಟ್ ವಂಚಿತ ವೈ.ಎಸ್.ವಿ ದತ್ತ ಅವರಿಗೆ ಕಡೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿದೆ.

ಅನ್ಯ ಪಕ್ಷದ ಅತೃಪ್ತರಿಗೆ ಟಿಕೆಟ್: ಜೆಡಿಎಸ್ ಇನ್ನೂ 80 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಿಸದೇ ಬಾಕಿ ಉಳಿಸಿಕೊಂಡಿದೆ. ಬಹುತೇಕ ತಮ್ಮ ಮತ ಬ್ಯಾಂಕ್ ಇರುವ ಕ್ಷೇತ್ರಗಳಲ್ಲಿ ಜೆಡಿಎಸ್ ಟಿಕೆಟ್ ಘೋಷಿಸಿದೆ. ಉಳಿದಂತೆ ಎರಡು ಮೂರು ಕ್ಷೇತ್ರಗಳನ್ನು ಬಿಟ್ಟು ತನ್ನ ಪ್ರಾಬಲ್ಯವಿಲ್ಲದ ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ. ಈ ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲು ಜೆಡಿಎಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತನ್ನ ಅಂತಿಮ‌ ಪಟ್ಟಿ ಬಿಡುಗಡೆಗೆ ಜೆಡಿಎಸ್ ಕಾಯುತ್ತಿದೆ. ರಾಷ್ಟ್ರೀಯ ಪಕ್ಷಗಳ ಅಂತಿಮ ಪಟ್ಟಿಯಲ್ಲಿ ಟಿಕೆಟ್ ವಂಚಿತ ಅಭ್ಯರ್ಥಿಗಳನ್ನು ಕರೆದು ಜೆಡಿಎಸ್​​ ಟಿಕೆಟ್ ನೀಡಲು ಮುಂದಾಗಿದೆ. ಆ ಮೂಲಕ ತಮ್ಮ ಪ್ರಾಬಲ್ಯವಿಲ್ಲದ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ಮುಂದಾಗಿದೆ.

ಈಗಾಗಲೇ ಕಾಂಗ್ರೆಸ್ ಎಂಎಲ್​​ಸಿ ರಘು ಆಚಾರ್ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರ್ಪಡೆಯಾಗಿದ್ದು, ಚಿತ್ರದುರ್ಗ ಕ್ಷೇತ್ರಕ್ಕೆ ಟಿಕೆಟ್ ನೀಡಲಿದ್ದಾರೆ. ಅದೇ ರೀತಿ ಬಿಜೆಪಿ ಟಿಕೆಟ್ ವಂಚಿತ ಮೂಡಿಗೆರೆ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದು, ಅವರು ಆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. ಇನ್ನು ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತ ಎನ್.ಆರ್.ಸಂತೋಷ್ ಜೆಡಿಎಸ್​​ನತ್ತ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಮಾತುಕತೆ ನಡೆಸಿದ್ದಾರೆ.‌ ಹಾಗಾಗಿ ಅರಸೀಕೆರೆ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿರುವ ಜೆಡಿಎಸ್ ಅವರಿಗೆ ಮಣೆ ಹಾಕುವುದು ಬಹುತೇಕ ಖಚಿತವಾಗಿದೆ.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಹಲವು ಅತೃಪ್ತರು ಜೆಡಿಎಸ್ ಪಕ್ಷಕ್ಕೆ ಬರಲಿದ್ದು, ಅತೃಪ್ತರಿಗೆ ಟಿಕೆಟ್ ನೀಡಿ ಜೆಡಿಎಸ್ ಪೈಪೋಟಿ ನೀಡಲು ಮುಂದಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸದ್ಯ ಜೆಡಿಎಸ್ ಉಳಿದ 81 ಕ್ಷೇತ್ರಗಳಿಗೆ ವಲಸಿಗರತ್ತ ಚಿತ್ತ ನೆಟ್ಟಿದೆ. ಅದಕ್ಕಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಇದನ್ನೂ ಓದಿ:ಜೆಡಿಎಸ್​​ 2ನೇ ಪಟ್ಟಿ: ಹಾಸನದಲ್ಲಿ ಭವಾನಿ ಬದಲು ಸ್ವರೂಪ್​, ಕಡೂರಲ್ಲಿ ದತ್ತಗೆ ಟಿಕೆಟ್​

ABOUT THE AUTHOR

...view details