ಬೆಂಗಳೂರು:ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಳೆದ 5 ವರ್ಷದಲ್ಲಿ ರಾಜ್ಯ ರಾಜಕಾರಣದಲ್ಲಿ ಉಂಟಾದ ಬದಲಾವಣೆಗಳು, ತಿರುವುಗಳು ಹಲವು. ರಾಜ್ಯದಲ್ಲಿ ನಡೆದ ಚುನಾವಣೆಗಳು ಹಾಗೂ ಉಪಚುನಾವಣೆಗಳು ರಾಜಕೀಯದ ಓಟದ ದಿಕ್ಕನ್ನು ವಿವರಿಸುತ್ತವೆ. ಸದ್ಯ ರಾಜ್ಯ ರಾಜಕಾರಣ ಇನ್ನೊಂದು ಪ್ರಮುಖ ಘಟ್ಟಕ್ಕೆ ಬಂದು ನಿಂತಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸರ್ಕಾರ ರಚನೆಯಾದ ಸಂದರ್ಭದಿಂದ 2022ರವರೆಗೂ ನಡೆದ ಚುನಾವಣೆ, ಉಪಚುನಾವಣೆಗಳು ರಾಜ್ಯ ರಾಜಕಾರಣ ಎತ್ತ ಸಾಗಿದೆ ಎಂಬ ಸ್ಪಷ್ಟ ಚಿತ್ರಣ ನೀಡುತ್ತಿವೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಳಿಕ 2019ರಲ್ಲಿ ಮತ್ತೊಂದು ಮಹಾ ಚುನಾವಣೆ ನಡೆದಿದೆ. ಅದು ಲೋಕಸಭೆ ಚುನಾವಣೆ. ಇದಕ್ಕೆ ಮುನ್ನ ಹಾಗೂ ನಂತರ ಹಲವು ಉಪಚುನಾವಣೆಗಳು, ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿದ್ದು, ಹಲವರ ಗೆಲುವು, ಸೋಲಿಗೆ ಇವು ಸಾಕ್ಷಿಯಾಗಿವೆ. ಪಕ್ಷಗಳ ಬಲಾಬಲವೇ ಬದಲಾಗಿದೆ. ಸರ್ಕಾರವೇ ಬದಲಾದ ಉದಾಹರಣೆ ಸಹ ಇದೆ. ಅವುಗಳ ಕಿರು ಪರಿಚಯ ಇಲ್ಲಿದೆ.
222 ಕ್ಷೇತ್ರಗಳಿಗೆ ಚುನಾವಣೆ:2018ರ ವಿಧಾನಸಭೆ ಚುನಾವಣೆ ಗಮನಿಸಿದಾಗ ಒಟ್ಟು 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2018ರ ಮೇ 2 ರಂದು ನಿಧನರಾದ ಕಾರಣ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣದ ನಂತರ ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು. ಮೇ 12 ರಂದು ಚುನಾವಣೆ ಜರುಗಿದ್ದು, ಮತ ಎಣಿಕೆ ಹಾಗೂ ಫಲಿತಾಂಶ ಮೇ 15ಕ್ಕೆ ಪ್ರಕಟಗೊಂಡಿತ್ತು. ಇದರಲ್ಲಿ ಬಿಜೆಪಿ 104, ಕಾಂಗ್ರೆಸ್ 80 ಹಾಗೂ ಜೆಡಿಎಸ್ 38 (ಬಿಎಸ್ಪಿ ಬೆಂಬಲಿತ ಒಬ್ಬ ಶಾಸಕ)ನ ಬಲ ಹೊಂದಿತ್ತು.
ಮೇ 28 ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದು ಮೇ 31ಕ್ಕೆ ಫಲಿತಾಂಶ ಹೊರಬಿತ್ತು. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದರು. ಜೂ.11 ರಂದು ಜಯನಗರ ನಗರ ಕ್ಷೇತ್ರದ ಚುನಾವಣೆ ನಡೆದು ಜೂ.13ರಂದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಗೆಲುವು ಸಾಧಿಸಿದರು.
ಉಪಚುನಾವಣೆ ಘೋಷಣೆ: ಈ ಮಧ್ಯೆ ಮೇ 28ರಂದು ಕಾರು ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟರು. ಮತ್ತೊಂದೆಡೆ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಿಂದ ಕಣಕ್ಕಿಳಿದು ಎರಡೂ ಕಡೆ ಗೆದ್ದಿದ್ದ ಜೆಡಿಎಸ್ನ ಹೆಚ್.ಡಿ. ಕುಮಾರಸ್ವಾಮಿ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದರು. ಮಂಡ್ಯ ಸಂಸದ ಸಿ.ಎಸ್. ಪುಟ್ಟರಾಜು ನಿಧನ ಹಿನ್ನೆಲೆ ತೆರವಾಗಿದ್ದ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಯಿತು. ಬಿ.ಎಸ್ ಯಡಿಯೂರಪ್ಪ ಶಿಕಾರಿಪುರದಿಂದ ಗೆದ್ದ ಹಿನ್ನೆಲೆ ಶಿವಮೊಗ್ಗ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಿ. ಶ್ರೀರಾಮುಲು ಮೊಳಕಾಲ್ಮೂರು ವಿಧಾನಸಭೆಯಿಂದ ಗೆದ್ದ ಹಿನ್ನೆಲೆ ಬಳ್ಳಾರಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಎಲ್ಲ ಕ್ಷೇತ್ರಗಳಿಗೆ 2018ರ ನವೆಂಬರ್ನಲ್ಲಿ ಉಪಚುನಾವಣೆ ನಡೆಯಿತು.
ಲೋಕಸಭೆ ಉಪಚುನಾವಣೆಯಲ್ಲಿ ಬಳ್ಳಾರಿಯಿಂದ ಕಾಂಗ್ರೆಸ್ನ ವಿ.ಎಸ್ ಉಗ್ರಪ್ಪ, ಮಂಡ್ಯದಿಂದ ಎಲ್.ಆರ್ ಶಿವರಾಮೇಗೌಡ, ಶಿವಮೊಗ್ಗದಿಂದ ಬಿ.ವೈ ರಾಘವೇಂದ್ರ ಸಂಸದರಾಗಿ ಆಯ್ಕೆಯಾದರು. ವಿಧಾನಸಭೆ ಉಪಚುನಾವಣೆಯಲ್ಲಿ ರಾಮನಗರಿಂದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ, ಜಮಖಂಡಿಯಿಂದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಗೆದ್ದರು. ಆಗ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು.