ಬೆಂಗಳೂರು:ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಇಂದು ರಾಜ್ಯದ ಗಡಿ ಭಾಗಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ. ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಚುನಾವಣಾ ಭದ್ರತೆ ಬಗ್ಗೆ ಮಾಹಿತಿ ನೀಡಿದ್ದಾರೆ.
ನಕಲಿ ಮತದಾನಕ್ಕೆ ಅವಕಾಶವಿಲ್ಲ: ರಾಜ್ಯದ ಎಲ್ಲ ಚೆಕ್ ಪೋಸ್ಟ್ಗಳಲ್ಲಿ ಭಾರಿ ಭದ್ರತೆ ಇರಲಿದ್ದು ಎಲ್ಲ ಎಸ್‌ಪಿ, ಕಮಿಷನರ್ಗಳು ರಾತ್ರಿ ಗಸ್ತು ತಿರುಗಲಿದ್ದಾರೆ. ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವವರನ್ನು ಪರಿಶೀಲನೆ ನಡೆಸಿ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ವಿನಾಕಾರಣ ಬೇರೆ ರಾಜ್ಯದಿಂದ ಬರುವಂತಿಲ್ಲ. ಯಾವುದೇ ನಕಲಿ ಮತದಾನ ಆಗದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೆ 2,896 ಎಫ್ಐಆರ್ಗಳು ದಾಖಲಾಗಿವೆ. ಸರಿಸುಮಾರು 52 ಕೋಟಿ ರೂ ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನವೇ ಜಪ್ತಿಯಾಗಿದೆ. ಇದುವರೆಗೂ ಶಿವಮೊಗ್ಗ, ಮಂಗಳೂರು, ಬೆಳಗಾವಿ ಸೇರಿ ಹಲವೆಡೆ ಒಟ್ಟು 230 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದರು.
ಇಂದು 1.5 ಲಕ್ಷ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 464 ಪ್ಯಾರಾಮಿಲಿಟರಿ ಫೋರ್ಸ್ಗಳು ಬಂದಿದೆ. 304 ಡಿವೈಎಸ್ಪಿ, 991 ಇನ್ಸ್ಪೆಕ್ಟರ್ಗಳು ಸೇರಿ 84 ಸಾವಿರ ಪೊಲೀಸರಿಂದ ಬಂದೋಬಸ್ತ್ ಇರಲಿದೆ. 185 ಬಾರ್ಡರ್ ಚೆಕ್ಪೋಸ್ಟ್ಗಳನ್ನು ಮಾಡಲಾಗಿದೆ. ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸಿಆರ್ಪಿಎಫ್, ಸಿಎಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.
ತಪ್ಪದೆ ಮತ ಹಾಕಿ: ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪ್ರಕ್ರಿಯೆ. ಆದ್ದರಿಂದ ಎಲ್ಲರೂ ಸಹ ತಪ್ಪದೇ ಮತದಾನ ಮಾಡಿ ಎಂದು ಅಲೋಕ್ ಕುಮಾರ್ ಮನವಿ ಮಾಡಿದರು.
₹375 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ: ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಯೋಗ ಚೆಕ್ ಪೋಸ್ಟ್ ಅಲ್ಲದೆ ತನಿಖಾ ತಂಡಗಳಿಂದ ಸಾಕಷ್ಟು ದಾಳಿಗಳನ್ನು ನಡೆಸಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 375.60 ಕೋಟಿ ರೂ ಮೌಲ್ಯದ ನಗದು ಮತ್ತು ವಸ್ತು, ಮದ್ಯ, ಮಾದಕವಸ್ತು, ಮತದಾರರಿಗೆ ನೀಡಲು ಬಳಸಿದ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 24.21 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ, 83.66 ಕೋಟಿ ಮೌಲ್ಯದ ಒಟ್ಟು 22.27 ಲಕ್ಷ ಲೀಟರ್ ಮದ್ಯ, 23.66 ಕೋಟಿ ಮೌಲ್ಯದ 1,954 ಕೆಜಿ ಡ್ರಗ್ಸ್ ಹಾಗೂ 96.59 ಕೋಟಿ ಮೌಲ್ಯದ ಚಿನ್ನ, ಬೆಳ್ಳಿಯನ್ನು ಜಪ್ತಿಯಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಒಟ್ಟು ₹375.60 ಕೋಟಿ ಮೌಲ್ಯದ ನಗದು, ವಸ್ತುಗಳ ವಶ