ಬೆಂಗಳೂರು :ರಾಜ್ಯದಲ್ಲಿ ಹೊಸದಾಗಿ ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲು ಉದ್ದೇಶಿಸಿರುವ 21 ತಾಲೂಕುಗಳಲ್ಲಿ ಆ್ಯಪ್ ಮೂಲಕ ತಳಮಟ್ಟದ ನೈಜ ಸ್ಥಿತಿ ಪರಿಶೀಲಿಸಿ, ಬರ ಕೈಪಿಡಿ ಅನ್ವಯ ದೃಢೀಕರಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮುಂಗಾರಿನಲ್ಲಿ ಉಂಟಾದ ಮಳೆ ಕೊರತೆಯಿಂದಾಗಿ ಈಗಾಗಲೇ ಬರ ಘೋಷಣೆ ಆಗಿರುವ 195 ತಾಲೂಕು ಹೊರತುಪಡಿಸಿ ಇನ್ನೂ 21 ತಾಲೂಕುಗಳಲ್ಲಿ ಬರ ಉಂಟಾಗಿರುವುದಾಗಿ ಸಚಿವ ಸಂಪುಟ ಉಪ ಸಮಿತಿ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು 21 ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಿದೆ.
ಇದಲ್ಲದೆ, ಈ ತಾಲೂಕುಗಳಲ್ಲಿ ಶೇಕಡಾ 10ರಷ್ಟು ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಮುಖ ಬೆಳೆಗಳನ್ನು ಗುರುತಿಸಿ ಪ್ರತಿ ಬೆಳೆಗಳ ಸುಮಾರು 5 ಜಮೀನುಗಳಿಗೆ (1 ಎಕರೆಗಿಂತ ಕಡಿಮೆ ಇಲ್ಲದ) ಭೇಟಿ ನೀಡಬೇಕು. ಹಾಗೂ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಗ್ರೌಂಡ್ ಟ್ರೂತನಿಂಗ್ ಮಾಡಿ ಬರ ಕೈಪಿಡಿಯಲ್ಲಿ ನಮೂದಿಸಿರುವ ದೃಢೀಕರಣ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.