ಬೆಂಗಳೂರು: ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನಗರ ಸಿವಿಲ್ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಬೆಂಗಳೂರಿನ ಪುರಭವನದಲ್ಲಿ ಇಂದು ನಡೆಯಬೇಕಿದ್ದ ಕೃತಿ ಬಿಡುಗಡೆಗೆ ತಡೆ ನೀಡುವಂತೆ ಸಿದ್ದರಾಮಯ್ಯಅವರ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮಕ್ಕೂ ಕೆಲ ನಿಮಿಷಗಳ ಮುನ್ನ ಕೋರ್ಟ್ನಿಂದ ತಡೆಯಾಜ್ಞೆ ಹೊರಬಿದ್ದಿದೆ.
ಇಂದು ಪುಸ್ತಕ ಬಿಡುಗಡೆ ವಿರೋಧಿಸಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಕುರುಬ ಸಮುದಾಯದ ನಾಯಕರು ನಗರದ ಪುರಭವನ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಧ್ಯೆ ಸಿಟಿ ಸಿವಿಲ್ ಕೋರ್ಟ್ ಸಹ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಪುಸ್ತಕ ಬಿಡುಗಡೆಗೆ ತಾತ್ಕಾಲಿಕ ತೆರೆ ಬಿದ್ದಿದೆ. ಟಿಪ್ಪು ಮಾದರಿಯಲ್ಲಿ ಸಿದ್ದರಾಮಯ್ಯರನ್ನು ಬಿಂಬಿಸಿ ಪುಸ್ತಕ ಬಿಡುಗಡೆಗೆ ಮುಂದಾಗಿದ್ದ ಆಯೋಜಕರಿಗೆ ಕೋರ್ಟ್ ತಡೆಯಾಜ್ಞೆಯಿಂದ ಹಿನ್ನಡೆ ಉಂಟಾಗಿದೆ.
ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹಾಗೂ ವಿಧಾನಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿತ್ತು. ಸಿದ್ದರಾಮಯ್ಯ ಅಲ್ಪಸಂಖ್ಯಾತ ಸ್ನೇಹಿ, ಮುಂದೆ ಅಧಿಕಾರಕ್ಕೆ ಬಂದರೆ ಯಾವ ರೀತಿ ಸರ್ಕಾರ ನಡೆಸಲಿದ್ದಾರೆ, ಯಾವ ಯೋಜನೆಗಳನ್ನು ತರಲಿದ್ದಾರೆ, ಯಾರ್ಯಾರು ಇವರ ಸಂಪುಟದಲ್ಲಿ ಸಚಿವರಾಗಲಿದ್ದಾರೆ ಎಂದು ಲೇವಡಿ ಮಾಡಿ ಈ ಕೃತಿ ಹೊರ ತರಲು ಯತ್ನಿಸಲಾಗಿತ್ತು. ಆದರೆ ಈಗ ಅದಕ್ಕೆ ಹಿನ್ನಡೆ ಆಗಿದೆ. ಇಂದು ಬೆಳಗ್ಗೆ ಸಿದ್ದರಾಮಯ್ಯ ಸಹ ತಾವು ಸಿಎಂ ಆಗಿದ್ದ ಅವಧಿಯ ಕೊಡುಗೆಗಳನ್ನು ಸಿದ್ದು ನಿಜ ಕನಸು ಎಂಬ ಶೀರ್ಷಿಕೆ ಅಡಿ ಬಿಂಬಿಸಿ ಬ್ರೋಷರ್ ಬಿಡುಗಡೆ ಮಾಡಿದ್ದರು.
ನ್ಯಾಯಾಲಯದ ಮಾಹಿತಿ:ಅರ್ಜಿ ಸಲ್ಲಿಸಿದ್ದ ಶಾಸಕ ಯತೀಂದ್ರ ಸಿದ್ದರಾಮಯ್ಯ ಈ ಕೃತಿಯನ್ನು ತಮ್ಮ ಹಾಗೂ ತಮ್ಮ ತಂದೆಯವರ ಗಮನಕ್ಕೆ ತರದೇ, ಲಿಖಿತ ಒಪ್ಪಿಗೆ ಇಲ್ಲದೇ ಮುದ್ರಿಸಲಾಗಿದೆ. ಇದು ತಮ್ಮ ತಂದೆಯವರ ಮಾನಿಹಾನಿಕರವಾಗಿದೆ. ಸಿದ್ದರಾಮಯ್ಯ ಭಾವನೆಗಳಿಗೆ ಧಕ್ಕೆ ತರುವಂತಿದೆ. ಇದರಿಂದಾಗಿ ಪುಸ್ತಕ ಬಿಡುಗಡೆಗೆ ಶಾಶ್ವತ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಈ ಕೃತಿ ಬಿಡುಗಡೆಯಾದರೆ ಸಿದ್ದರಾಮಯ್ಯ ಮಾನಹಾನಿಯಾಗಲಿದೆ. ಇದರಿಂದ ಈ ಕೃತಿ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ದೂರು ಪರಿಶೀಲಿಸಿದ ಬಳಿಕ ಸಿಟಿ ಸಿವಿಲ್ ನ್ಯಾಯಾಲಯವು ಈ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಸಮಾರಂಭ ರದ್ದುಗೊಳಿಸಿದ ಆಯೋಜಕರು:ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಸಿದ್ದು ನಿಜಕನಸುಗಳು ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜನರು ರದ್ದುಗೊಳಿಸಿದ್ದಾರೆ. ಕಾನೂನು ಮೂಲಕವೇ ಕೃತಿ ಬಿಡುಗಡೆಗೆ ಪ್ರಯತ್ನ ನಡೆಸಲಾಗುತ್ತದೆ ಎಂದು ಪ್ರಕಟಿಸಿದ್ದಾರೆ. ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಆದೇಶದ ಪ್ರತಿಗಾಗಿ ಕಾದ ಆಯೋಜಕರು 3.30ಕ್ಕೆ ಅಧಿಕೃತವಾಗಿ ಕಾರ್ಯಕ್ರಮ ರದ್ದುಪಡಿಸಿರುವುದಾಗಿ ಪ್ರಕಟಿಸಿದರು. ಕೆಲವೇ ನಿಮಿಷಗಳ ಮೊದಲು ಕೃತಿ ಬಿಡುಗಡೆಗೆ ತಡೆ ಬಂದಿದೆ, ಕಾನೂನಿಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ, ಭಾರತೀಯ ಸಂಸ್ಕೃತಿ ಹಾಗಾಗಿ ಕಾರ್ಯಕ್ರಮ ರದ್ದು ಮಾಡುತ್ತಿದ್ದು, ನಾವೂ ಕೋರ್ಟ್ ಮೊರೆ ಹೋಗಿ ಮತ್ತೆ ಪುಸ್ತಕ ಬಿಡುಗಡೆಗೆ ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ತೇಜೋವಧೆ ಮಾಡುವ ಕುತಂತ್ರ ಎಂದಿದ್ದ ಸಿದ್ದರಾಮಯ್ಯ:ಪುಸ್ತಕ ಬಿಡುಗಡೆ ಬಗ್ಗೆ ಸೋಮವಾರ ಬೆಳಗ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ನನ್ನ ತೇಜೋವಧೆ ಮಾಡಲು ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಇಂತಹ ಪುಸ್ತಕಗಳನ್ನು ಹೊರತರುತ್ತಿದೆ. ಟಿಪ್ಪು ಹಾಗೂ ನನ್ನ ಬಗೆಗಿನ ಪುಸ್ತಕ ಬಿಡುಗಡೆ ವಿಚಾರ ನನಗೆ ತಿಳಿದಿಲ್ಲ. ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿ ಕಾಣಿಸುತ್ತದೆ. ಟಿಪ್ಪುನಂತೆ ಖಡ್ಗ ಹಿಡಿದು ಬಟ್ಟೆ ಧರಿಸಿದವರು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ. ಟಿಪ್ಪು ಬಗೆಗಿನ ಶೇಖ್ ಅಲಿ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು? ಇದು ಇಬ್ಬಂದಿತನ ಅಲ್ವಾ? ಚುನಾವಣೆ ಸಮೀಸುತ್ತಿರುವಾಗ ಇಂಥ ಪುಸ್ತಕ ಹೊರತರುತ್ತಿರುವುದು ಮಾನನಷ್ಟದ ಉದ್ದೇಶ ಹೊಂದಿದೆ. ಕಾನೂನು ಪ್ರಕಾರ ಏನು ಮಾಡೋಕೆ ಆಗುತ್ತೆ ನೋಡೋಣ ಎಂದು ಹೇಳಿದ್ದರು.
ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ:ಕೃತಿ ಬಿಡುಗಡೆ ಸಮಾರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನ ಟೌನ್ ಹಾಲ್ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ, ಗಲಾಟೆಯ ವೇದಿಕೆಯಾಗಿ ಪರಿಣಮಿಸಿತ್ತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದರು. ಟೌನ್ ಹಾಲ್ ಮುಂಭಾಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದ ಘಟನೆ ನಡೆಯಿತು. ಸಿದ್ದು ನಿಜ ಕನಸುಗಳ ಕೃತಿ ಬಿಡುಗಡೆ ಸಮಾರಂಭಕ್ಕೆ ಸಿದ್ದು ನಿಜ ಜೀವನಗಳ ಪುಸ್ತಕ ಕುರಿತ ಬ್ಯಾನರ್ ಹಾಗೂ ಭಿತ್ತಿ ಪತ್ರ ಹಿಡಿದು ಧಿಕ್ಕಾರ ಕೂಗುತ್ತಾ ಬಿಜೆಪಿ ಕಾರ್ಯಕರ್ತರು ಆಗಮಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರ ಕೈಯಿಂದ ಬ್ಯಾನರ್ ಕಿತ್ತುಕೊಳ್ಳಲು ಮುಂದಾದ ಕೈ ಕಾರ್ಯಕರ್ತರು ಮುಂದಾದ ವೇಳೆ ಕೈ ಹಾಗೂ ಕಮಲ ಕಾರ್ಯಕರ್ತರ ನಡುವೆ ತಳ್ಳಾಟ - ನೂಕಾಟ ನಡೆಯಿತು. ಘೋಷಣೆ, ದಿಕ್ಕಾರ ಮೊಳಗಿದವು, ಪರಿಸ್ಥಿತಿ ಕೈಮೀರುವ ಸನ್ನಿವೇಶ ಎದುರಾಗುವ ಆತಂಕ ಸೃಷ್ಟಿಯಾಗುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದು ಅಲ್ಲಿಂದ ಕರೆದೊಯ್ದರು.
ಇದನ್ನೂ ಓದಿ:ಚುನಾವಣೆ ಹೊತ್ತಲ್ಲಿ ನನ್ನ ತೇಜೋವಧೆಗೆ ಬಿಜೆಪಿಯಿಂದ ಪುಸ್ತಕ: ಸಿದ್ದರಾಮಯ್ಯ