ಬೆಂಗಳೂರು : ಕಾಲೇಜು ಪರವಾನಗಿ ಅವ್ಯವಹಾರ ತನಿಖೆ ಸದನ ಸಮಿತಿಗೆ ವಹಿಸಬೇಕು ಎಂದು ಒತ್ತಾಯಿಸಿದ ಜೆಡಿಎಸ್ ಸದಸ್ಯರು ಸಭಾಪತಿಗಳ ಸಭೆಯ ನಂತರವೂ ಪ್ರತಿಭಟನೆ ಮುಂದುವರಿಸಿದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಾಮಾಣಿಕ ತನಿಖೆ ನಡೆಯಲಿದೆ. ಪ್ರತಿಭಟನೆ ಹಿಂಪಡೆಯಿರಿ ಎಂದು ಕೋರಿದರು. ಆದರೆ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಸಚಿವರು ಇಲ್ಲವೇ ಸರ್ಕಾರದ ಪ್ರತಿನಿಧಿಯ ನೇತೃತ್ವದಲ್ಲಿ ಸದನ ಸಮಿತಿ ರಚನೆ ಆಗಲಿ. ಈಗಿನ ತನಿಖೆ ಬಗ್ಗೆ ನಮಗೆ ವಿಶ್ವಾಸವಿಲ್ಲ ಎಂದರು.
ಇದಕ್ಕೆ ಉತ್ತರ ನೀಡಿದ ಸಚಿವ ಸುಧಾಕರ್, ಕೇವಲ 90 ದಿನದಲ್ಲಿ ಸೂಕ್ತ, ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ. ವರದಿ ಸಮಾಧಾನ ತರದಿದ್ದರೆ ಪರಿಷತ್ ಸಭಾಪತಿಗಳು ಸೂಚಿಸುವ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ವರದಿ ಸಾಕಷ್ಟು ಪಾರದರ್ಶಕವಾಗಿ ಬರಲಿದೆ. ಅದಾಗಿಯೂ ಅನುಮಾನಗಳಿದ್ದರೆ ಸಿಎಂ ಜೊತೆ ಚರ್ಚಿಸಿ ಸೂಕ್ತ ತನಿಖೆಗೆ ಒಪ್ಪಿಸುತ್ತೇವೆ ಎಂದರು. ಆದರೂ ಜೆಡಿಎಸ್ ಸದಸ್ಯರು ಸದನದ ಬಾವಿಯಿಂದ ಸ್ಥಳಕ್ಕೆ ವಾಪಸಾಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಸಭಾಪತಿಗಳು ಸದನ ಮುಂದುವರಿಸಬೇಕೆಂದು ಆಡಳಿತ ಪಕ್ಷ ನಾಯಕರು ಮನವಿ ಮಾಡಿದರು. ಸದನ ಸಮರ್ಪಕವಾಗಿ ಇರದ ಹಿನ್ನೆಲೆ ಪ್ರಶ್ನೆ ಕೇಳುವುದು ಹೇಗೆ..? ಗಂಭೀರವಾದ ಪ್ರಶ್ನೆ ಇದೆ. ಕೋಟ್ಯಾಂತರ ರೂ. ಅವ್ಯವಹಾರ ನಡೆದಿದೆ. ಈ ಗದ್ದಲದಲ್ಲಿ ಚರ್ಚೆ ಅಸಾಧ್ಯ ಎಂದು ಕಾಂಗ್ರೆಸ್ ಸಚೇತಕ ಎಂ. ನಾರಾಯಣಸ್ವಾಮಿ ಅಭಿಪ್ರಾಯ ಪಟ್ಟರು.
ಇದನ್ನೂ ಓದಿ: ಅನುದಾನ ತಾರತಮ್ಯ: ಸಿಎಂ ಅಭಯ ಹಿನ್ನೆಲೆ ಪ್ರತಿಭಟನೆ ವಾಪಸ್ ಪಡೆದ ಜೆಡಿಎಸ್ ಸದಸ್ಯರು
ಸದನ ಮುಂದೂಡಲು ಸಭಾಪತಿ ಬಸವರಾಜ್ ಹೊರಟ್ಟಿ ಮುಂದಾದಾಗ ಬಿಜೆಪಿ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಕಲಾಪ ಮುಂದುವರೆಸುವಂತೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ನಾವು ನ್ಯಾಯಾಲಯದ ಮೆಟ್ಟಿಲೇರಿದ ಸಚಿವರ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ. ಪಕ್ಷದ ನಿಲುವು ಇದಾಗಿದೆ, ದಯವಿಟ್ಟು ಇನ್ನೊಂದು ಸಾರಿ ಸಭೆ ನಡೆಸಿ ಚರ್ಚಿಸಿ ಎಂದರು.
ಎಂ. ನಾರಾಯಣಸ್ವಾಮಿ ಮಾತನಾಡಿ, ಹಿಂದೆ ಸದನದಲ್ಲಿ ಶುದ್ಧ ಕುಡಿಯುವ ನೀರಿನ ಅವ್ಯವಹಾರ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ನಡೆದ ಅವ್ಯವಹಾರ ತನಿಖೆ ಸದನ ಸಮಿತಿಗೆ ವಹಿಸಲು ಕೋರಿದಾಗ ನಾವು ಸಹಕಾರ ನೀಡಿದ್ದೆವು. ಈಗಲೂ ಕಾಲೇಜು ಪರವಾನಗಿ ಅವ್ಯವಹಾರ ತನಿಖೆ ಸದನ ಸಮಿತಿಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಸಾಕಷ್ಟು ಮಹತ್ವದ ಚರ್ಚೆ ನಡೆಯಬೇಕಿದೆ. ಆದ್ದರಿಂದ ದಯವಿಟ್ಟು ಎಲ್ಲಾ ಜೆಡಿಎಸ್ ಸದಸ್ಯರು ತಮ್ಮ ಸ್ಥಾನಕ್ಕೆ ತೆರಳಬೇಕು ಎಂದು ಕೋರಿದರು.
ಇದಕ್ಕೆ ಒಪ್ಪದ ಜೆಡಿಎಸ್ ಸದಸ್ಯರು 60 ವರ್ಷಗಳ ಅವ್ಯವಹಾರ ಇದು, ಇದಕ್ಕೊಂದು ಅಂತ್ಯ ಕಲ್ಪಿಸಬೇಕು, ನ್ಯಾಯ ಕೊಡಬೇಕು ಎಂದರು. ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಹಿಂದೆ ಕುಡಿಯುವ ನೀರಿನ ಘಟಕ ಅವ್ಯವಹಾರ ಸಂಬಂಧ ಎರಡು ಸಾರಿ ತನಿಖೆ ನಡೆಸಿ ವರದಿ ಸರ್ವ ಪಕ್ಷಗಳಿಗೆ ಸಮಾಧಾನ ತರದಿದ್ದಾಗ ಅದನ್ನು ಸದನ ಸಮಿತಿಗೆ ವಹಿಸಲಾಗಿತ್ತು ಎಂದರು.
ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಈ ಸ್ಥಿತಿಯಲ್ಲಿ ಕಲಾಪ ಮುಂದುವರಿಸುವುದು ಕಷ್ಟ. ಸಮಸ್ಥಿತಿಗೆ ಬರುವವರೆಗೂ ಕಲಾಪ ಮುಂದೂಡಿ ಎಂದು ಸಲಹೆ ಇತ್ತರು. ಜೆಡಿಎಸ್ ಸದಸ್ಯರು ಪ್ರತಿಭಟನೆ ಮುಂದುವರಿಸಿದ ನಡುವೆಯೇ, ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ನಾವು ಕೇಳಿದ ಪ್ರಶ್ನೆಗೆ ಸಚಿವರು ನೀಡಿದ ಉತ್ತರ ಕೇಳಿಸದ ಸಂದರ್ಭದಲ್ಲಿ ಚರ್ಚೆಯಲ್ಲಿ ಹೇಗೆ ಭಾಗವಹಿಸಲು ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು. ಜೆಡಿಎಸ್ ಗದ್ದಲ ಹಾಗೂ ಕಾಂಗ್ರೆಸ್ ಸದಸ್ಯರ ಬೇಸರ ಮುಂದುವರಿದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು ನಾಳೆ ಬೆಳಗ್ಗೆ 10 ಗಂಟೆಗೆ ಮುಂದೂಡಿದರು.