ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ವಿಚಾರಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ.
ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ, ರಮೇಶ್ ಜಾರಕಿಹೊಳಿಯ ಅತ್ಯಾಚಾರ ಪ್ರಕರಣವೊಂದೇ ಸಾಕು ಬಿಜೆಪಿ ಆಡಳಿತದ ನಿಜಬಣ್ಣ ತಿಳಿಯಲು. ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿಯಂತೆ ಸತತವಾಗಿ ವಿಚಾರಣೆ ನಡೆಸಲಾಗುತ್ತಿದೆ. ಅತ್ಯಾಚಾರ ಆರೋಪಿಯನ್ನು ರಾಜ ಮರ್ಯಾದೆಯಲ್ಲಿ ನೆಪಮಾತ್ರದ ವಿಚಾರಣೆ ನಡೆಸಲಾಗಿದೆ ಎಂದಿದೆ.
ಈ ಪ್ರಕರಣದಿಂದ ಚಳಿ ಜ್ವರ ಬಂದಿರುವ ಅತ್ಯಾಚಾರ ಆರೋಪಿಗೆ ನಿಜಕ್ಕೂ ಅನಾರೋಗ್ಯವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ? ಪೊಲೀಸರೂ ಆರೋಪಿ ತಲೆಮರೆಸಿಕೊಳ್ಳುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆರೋಪಿಯ ಮೊಬೈಲ್‌ನ್ನು ಹಲವು ದಿನಗಳವರೆಗೆ ಪೊಲೀಸರು ವಶಪಡಿಸಿಕೊಂಡಿಲ್ಲ, ಸಾಕ್ಷ್ಯ ನಾಶಕ್ಕೆ ಸಾಕಷ್ಟು ಸಮಯ ಬೇಕಿತ್ತೋ ಏನೋ ಎಂದು ಹೇಳಿದೆ.
ಆರೋಪಿ ಮಾಜಿ ಮಂತ್ರಿಯನ್ನು ವಿಚಾರಣೆಗೆ ಕರೆಸಿ ಹಿಂಬಾಗಿಲ ಮೂಲಕ ಕಳಿಸಿಕೊಡುತ್ತಾರೆ ಪೊಲೀಸರು. ಸಂತ್ರಸ್ತೆಗೆ ವಿಶ್ರಾಂತಿಯೂ ನೀಡದಂತೆ ಸತತ ವಿಚಾರಣೆ ನಡೆಸುತ್ತಾರೆ. ಆರೋಪಿಯನ್ನು ಕರೆದುಕೊಂಡು ಹೋಗಿ ಮಹಜರು ಮಾಡುವ ಬದಲಿಗೆ ಸಂತ್ರಸ್ತೆಯನ್ನು ಕಾಡಿಸಿ ಮಹಜರು ನಡೆಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಆರೋಪಿಯ ಕುಟುಂಬ, ಆರೋಪಿ ವಾಸಿಸುತ್ತಿದ್ದ ಸ್ಥಳ, ಬಳಸುತ್ತಿದ್ದ ಮೊಬೈಲ್ ಮುಂತಾದವುಗಳನ್ನು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಇಲ್ಲಿ ಎಲ್ಲವೂ ಉಲ್ಟಾ, ದೂರು ನೀಡಿದ ಸಂತ್ರಸ್ತೆಯನ್ನೇ ಆರೋಪಿ ಎನ್ನುವಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಆರೋಪಿಯ ಕುಟುಂಬದ ವಿಚಾರಣೆ ಮಾಡುವ ಬದಲಿಗೆ ಸಂತ್ರಸ್ತೆಯ ಕುಟುಂಬದ ವಿಚಾರಣೆ. ಆರೋಪಿಯ ದೂರಿನಲ್ಲಿ ಸಂತ್ರಸ್ತೆಯ ಹೆಸರಿಲ್ಲದಿದ್ದರೂ ಯುವತಿಯೇ ಆರೋಪಿ ಎಂಬಂತೆ ವಿಚಾರಣೆ. ಸಂತ್ರಸ್ತೆಯ ದೂರಿನಲ್ಲಿ ಆರೋಪಿ ಹೆಸರು ನೇರವಾಗಿ ಉಲ್ಲೇಖವಿದೆ, ಆದರೂ ಬಂಧನವಿಲ್ಲ, ಸಮರ್ಪಕ ವಿಚಾರಣೆಯೂ ಇಲ್ಲ ಎಂದು ವಿವರಿಸಿದೆ.
ಆರೋಪಿಯನ್ನು ಬಂಧಿಸದೇ ಚುನಾವಣಾ ಪ್ರಚಾರಕ್ಕೆ ಸ್ವತಃ ಮುಖ್ಯಮಂತ್ರಿ ಕರೆಯುತ್ತಾರೆ. ಸ್ವತಃ ಸಿಎಂ ತನಿಖೆ ನಡೆಸದೆ ಅವರದು ತಪ್ಪಿಲ್ಲ ಎಂದು ಕ್ಲೀನ್ ಚಿಟ್ ನೀಡುತ್ತಾರೆ. ನಾವೆಲ್ಲ ಆರೋಪಿ ಬೆಂಬಲಕ್ಕಿದ್ದೇವೆ ಎಂದು ಹಲವು ಸಚಿವರು ಹೇಳುತ್ತಾರೆ. ಇದೆಲ್ಲವೂ ಆರೋಪಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎನ್ನಲು ನಿದರ್ಶನ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿದೆ: ಸಚಿವ ಭೈರತಿ ಬಸವರಾಜ