ಬೆಂಗಳೂರು: ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುವ ಕಾರ್ಯ ಆರಂಭವಾಗಿದೆ. ಈ ತಿಂಗಳು 15 ರವರೆಗಿದು ಮುಂದುವರಿಯಲಿದೆ. ಈ ಬಾರಿ ಕಾಂಗ್ರೆಸ್ ಸಾಕಷ್ಟು ನಿಯಮ, ನಿರ್ಬಂಧಗಳನ್ನು ವಿಧಿಸಿದೆ. ಅಕಾಂಕ್ಷಿಗಳಿಂದ ದೊಡ್ಡ ಮೊತ್ತದ ದೇಣಿಗೆಯನ್ನೂ ಸಹ ನಿರೀಕ್ಷಿಸುತ್ತಿದೆ.
ಪಕ್ಷ ಬಲವರ್ಧನೆಗೆ ಡಿಡಿ ರೂಪದಲ್ಲಿ ನಿಧಿ:ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷದಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದು ಸಮನ್ವಯ ಸಾಧಿಸಬೇಕಿದೆ. ಈಗಾಗಲೇ 25ಕ್ಕೂ ಹೆಚ್ಚು ಅರ್ಜಿ ಸ್ವೀಕೃತಿ ಆಗಿದೆ ಎಂಬ ಮಾಹಿತಿ ಇದೆ. ಆಕಾಂಕ್ಷಿಗಳಿಂದ ಕಟ್ಟಡ ನಿಧಿ ಹೆಸರಿನಲ್ಲಿ ಡಿಡಿ ರೂಪದಲ್ಲಿ ಪಕ್ಷ ಬಲವರ್ಧನೆಗೆ ನಿಧಿ ಸಂಗ್ರಹಿಸಲಾಗುತ್ತಿದೆ. ಅರ್ಜಿ ನಮೂನೆ ಪಡೆಯಲು 5 ಸಾವಿರ ರೂ. ಶುಲ್ಕ ಪಾವತಿಸಬೇಕು. ಇದಾದ ಬಳಿಕ ಭರ್ತಿ ಮಾಡಿದ ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರು 1 ಲಕ್ಷ ರೂ. ಮೊತ್ತವನ್ನು ಪಕ್ಷದ ಹೆಸರಿನಲ್ಲಿ ಡಿಡಿ ತೆಗೆದು ನೀಡುವ ನಿಯಮ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.