ಕರ್ನಾಟಕ

karnataka

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ: ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

By

Published : Dec 8, 2020, 12:44 PM IST

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಹೋರಾಟಕ್ಕೆ ರಾಜ್ಯ ಕಾಂಗ್ರೆಸ್​ ನಾಯಕರು ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ವಿಧಾನಸೌಧದ ಮುಂಭಾಗ ಪ್ರತಿಭಟನೆ
ವಿಧಾನಸೌಧದ ಮುಂಭಾಗ ಪ್ರತಿಭಟನೆ

ಬೆಂಗಳೂರು: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು, ಶಾಸಕರು ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ಮುಖಂಡರಾದ ಡಾ.ಜಿ. ಪರಮೇಶ್ವರ್, ಎಸ್.ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದ ಮುಂಭಾಗ ಪ್ರತಿಭಟನೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ರೈತರಿಗೆ ಪಕ್ಷ, ಜಾತಿ, ಧರ್ಮವಿಲ್ಲ. ಇದು ರೈತರ ಮರಣ ಶಾಸನ. ಕಾಯ್ದೆ ತರಬೇಕಾದರೆ ಯಾರನ್ನೂ ಒಂದು ಮಾತು ಕೇಳಿಲ್ಲ. ನಾವು ಯಾವುದಾದರೂ ಕಾನೂನು ತರುವಾಗ ಎಲ್ಲರನ್ನ ಕೇಳ್ತಿದ್ವಿ. ಆದರೆ ಇವರು ಸರ್ವಾಧಿಕಾರಿ ಧೋರಣೆ ತೋರಿ ಯಾರನ್ನೂ ಕೇಳಿಲ್ಲ ಎಂದು ಆರೋಪಿಸಿದರು.

ದೇಶದ ರೈತರ ಪರ ನಾವಿದ್ದೇವೆ. ಅವರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ಕೇಂದ್ರ ತಂದಿರುವ ಕಾಯ್ದೆ ರೈತ ವಿರೋಧಿಯಾದುದು. ರೈತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು. ದೇಶದ ಪ್ರತಿ ಕಾನೂನನ್ನ ಬದಲಾಯಿಸುತ್ತಿದೆ. ಇಲ್ಲಿ ವ್ಯಾಪಾರ ಮಾಡಿದರೆ ಸೆಸ್ ಇದೆಯಂತೆ. ಹೊರಗಡೆ ವ್ಯಾಪಾರಕ್ಕೆ ಸೆಸ್ ಇಲ್ಲವಂತೆ. ರೈತರನ್ನ‌ ಗುಲಾಮರನ್ನಾಗಿ ಮಾಡೋಕೆ ಹೊರಟಿದೆ. ರೈತ ಬೆಳೆದ ಬೆಳೆ ಮಾರಾಟಕ್ಕೆ ಸ್ವಾತಂತ್ರ್ಯವಿಲ್ಲ. ರೈತರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅನ್ನದಾತರ ಪರ ನಾವು ನಿಲ್ತೇವೆ. ರಾಜ್ಯದ ಸಿಎಂ ಹಸಿರು ಶಾಲು ಹಾಕಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ರೈತನಿಗೆ ಮಾತ್ರ ಉಪಯೋಗ ಮಾಡಲ್ಲ ಎಂದು ಗುಡುಗಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ರೈತ ವಿರೋಧಿ, ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ. ಎಪಿಎಂಸಿ, ಲೇಬರ್ ಆ್ಯಕ್ಟ್‌ಗೆ ತಿದ್ದುಪಡಿ ತಂದಿದ್ದಾರೆ. ಕರ್ನಾಟಕದಲ್ಲೂ ಲೇಬರ್ ಆ್ಯಕ್ಟ್, ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕಾನೂನುಗಳಿಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ. ಅಂಬಾನಿ, ಅದಾನಿಯ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಯಾಗಿ ಕೆಲಸ ಮಾಡ್ತಿದೆ. ದೇಶದಲ್ಲಿ ಹಲವು ರಾಜಕೀಯ ಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ ಎಂದರು.

ಭಾರತ್ ಬಂದ್‌ಗೆ ದೇಶಾದ್ಯಂತ ಕಾಂಗ್ರೆಸ್​ನಿಂದ ಬೆಂಬಲ ಕೊಟ್ಟಿದ್ದೇವೆ. ಇವತ್ತು ಱಲಿಯಲ್ಲಿ ನಾನು ಭಾಗಿಯಾಗಬೇಕಿತ್ತು. ಆದ್ರೆ ಅಧಿವೇಶನ ಇರೋದ್ರಿಂದ ಇಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ವಿರೋಧಿಸಿದ್ದೇವೆ. ಸದನದಲ್ಲಿ ಪ್ರತಿಭಟನೆ ಮಾಡಲ್ಲ, ಕಪ್ಪುಪಟ್ಟಿ ಕಟ್ಕೊಂಡು ಭಾಗವಹಿಸ್ತೇವೆ. ಎಪಿಎಂಸಿಗಳನ್ನ ಮುಚ್ಚೋಕೆ ಇದು ಸೂಕ್ತ ಕಾಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚಲ್ಲ ಎಂದು ಮೋದಿ ಹೇಳಿದ್ದಾರೆ. ಮೋದಿ ಡೋಂಗಿ. ಯಾವಾಗಲೂ ಸುಳ್ಳು ಹೇಳ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ABOUT THE AUTHOR

...view details