ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸುದೀರ್ಘ ಪ್ರತಿಭಟನೆ ನಡೆಸಿದರು.
300 ಕಡೆಮೌನ ಪ್ರತಿಭಟನೆ:ನಗರದ ಒಟ್ಟು 300ಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ 51 ಮೆಟ್ರೊ ನಿಲ್ದಾಣ, 26 ಮೇಲ್ಸೇತುವೆ, 200 ಟ್ರಾಫಿಕ್ ಸಿಗ್ನಲ್ ಸೇರಿದಂತೆ 300 ಕಡೆಗಳಲ್ಲಿ ಮೌನ ಪ್ರತಿಭಟನೆ ನಡೆದಿದೆ.
ತಪ್ಪುಗಳನ್ನು ಸರಿಪಡಿಸಬೇಕು: ಪ್ರತಿಭಟನೆಯಲ್ಲಿ ಭಾಗಿಯಾದ ಶಾಸಕ ಎನ್.ಎ ಹ್ಯಾರಿಸ್ ಮಾತನಾಡಿ, 'ಪ್ರತಿಪಕ್ಷವಾಗಿ ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ. ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ಕೊಡುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಮನೆಯಲ್ಲಿ ಕಷ್ಟ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದೆ. ಹಾಗಿದ್ದಾಗ ಪೆಟ್ರೋಲ್ ದರ ಏಕೆ ಕಡಿಮೆ ಮಾಡುತ್ತಿಲ್ಲ. ಇವರಿಗೆ ಬೇಕಾದವರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ತಮ್ಮ ತಪ್ಪುಗಳನ್ನು ಸರಿಪಡಿಸಬೇಕು' ಎಂದು ಒತ್ತಾಯಿಸಿದರು.
ಲೂಟಿ ಮಾಡಿದವರು ಯಾರು?: ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಆಡಳಿತದ 60 ವರ್ಷ ಅವಧಿಯಲ್ಲಿ ಅಕ್ರಮ ನಡೆದಿದ್ದರೆ ತನಿಖೆ ಮಾಡಿಸಿ. ಈಗ ಮಾತಾಡಿದರೆ ಹೇಗೆ?. ಕೊರೊನಾ ಸಮಯದಲ್ಲಿ ಲೂಟಿ ಮಾಡಿದವರು ಯಾರು?. ಸುಧಾಕರ್ ಯಾರ ಪಕ್ಷದಲ್ಲಿ ಇದ್ದರು. ಈಗ ನಮ್ಮ ವಿರುದ್ಧ ಮಾತನಾಡುತ್ತಾರೆ. ಲಸಿಕೆ, ಔಷಧ, ಬೆಡ್ನಲ್ಲಿ ಹಣ ಮಾಡಿದ್ದು ಇವರೇ ಅಲ್ಲವೇ? ಎಂದು ಪ್ರಶ್ನಿಸಿದರು.