ಬೆಂಗಳೂರು:ಹಿಜಾಬ್ ವಿಚಾರ ಮತ್ತು ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ನೆರವು ನೀಡುವಂತೆ ಕೋರಿ ಕಾಂಗ್ರೆಸ್ ಮುಸ್ಲಿಂ ಶಾಸಕರ ನಿಯೋಗ ಸಿಎಂ ಬೊಮ್ಮಾಯಿ ಅವರರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, 'ಸಿಎಂ ಭೇಟಿ ಮಾಡಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚಿನ ಅನುದಾನ ಕೇಳಿದ್ದೇವೆ. ಶಿಕ್ಷಣಕ್ಕೂ ಹೆಚ್ಚಿನ ಅನುದಾನ ಕೊಡಲು ಮನವಿ ಮಾಡಿದ್ದೇವೆ. ಹಿಜಾಬ್ ಸಂಬಂಧ ಕೋರ್ಟ್ ಸಂವಿಧಾನದ ಆಧಾರದಲ್ಲಿ ಏನೇ ತೀರ್ಪು ಕೊಟ್ಟರೂ ನಾವು ಅದಕ್ಕೆ ಬದ್ಧ. ಕೋರ್ಟ್ ಸಂವಿಧಾನಾತ್ಮಕ ತೀರ್ಪು ನೀಡುವ ಬಗ್ಗೆ ವಿಶ್ವಾಸ ಇದೆ' ಎಂದು ಹೇಳಿದ್ದಾರೆ.
ಇದೇ ವೇಳೆ ಸರ್ಕಾರವನ್ನು ಟೀಕಿಸಿದ ಅವರು, 'ಸರ್ಕಾರವೂ ಹಿಜಾಬ್ ಕೇಸರಿ ಶಾಲು ಪ್ರಕರಣ ನಿರ್ವಹಿಸುವಲ್ಲಿ ವಿಫಲವಾಗಿದೆ. ಕೆಲ ಶಾಲಾ ಕಾಲೇಜುಗಳು ಮಕ್ಕಳ ವಿಚಾರದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ. ಈ ಎಲ್ಲವನ್ನೂ ಸಿಎಂ ಅವರ ಗಮನಕ್ಕೆ ತಂದಿದ್ದೇವೆ. ಹಿಜಾಬ್ ಪ್ರಕರಣದ ಹಿಂದೆ ಕಾಣದ ಕೈಗಳಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ, ಜೊತೆಗೆ ಪ್ರಕರಣದ ಸಂಬಂಧ ಕೋರ್ಟ್ ಆದೇಶ ಪಾಲನೆಗೆ ಮನವಿ ಮಾಡಿದ್ದೇವೆ' ಎಂದರು.