ಬೆಂಗಳೂರು:ಕೇಂದ್ರ ಗೃಹ ಇಲಾಖೆ ಇಂದು ಪಿಎಫ್ಐ ಸಂಘಟನೆ ನಿಷೇಧ ಆಗಿರುವುದನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಯಾರು ಕಾನೂನು ವಿರುದ್ಧವಾಗಿ ಇರ್ತಾರೆ, ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಆರ್ಎಸ್ಎಸ್ನವರೂ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಸಂಘಟನೆ ಆದರೂ ಬ್ಯಾನ್ ಮಾಡಬೇಕು ಎಂದರು. ಇದೇ ವೇಳೆ, ನಾವು ನುಡಿದಂತೆ ನಡೆದಿದ್ದೇವೆ ಎಂಬ ಬಿಜೆಪಿ ಟ್ವೀಟ್ಗೆ ಸಿದ್ದರಾಮಯ್ಯ ತಿರುಗೇಟು ನೀಡಿ, ಇಷ್ಟು ದಿನ ಯಾಕೆ ಮಾಡಿರಲಿಲ್ಲ?. ಇಷ್ಟು ದಿನ ಏನ್ ಮಾಡುತ್ತಿದ್ದರು. ನಾವು ಹೇಳಿದ ಮೇಲೆ ಅವರು ಮಾಡಿದ್ದಾರೆ ಎಂದು ಹೇಳಿದರು.
ಒಂದೇ ನಾಣ್ಯದ ಇನ್ನೊಂದು ಮುಖ:ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿ, ಸುದೀರ್ಘವಾದ ಚಂಚಲತೆಯ ನಂತರ ಒಂದು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ. ಪಿಎಫ್ಐ ಜೊತೆಗೆ ಒಂದೇ ನಾಣ್ಯದ ಇನ್ನೊಂದು ಮುಖ ಆಗಿರುವ ಆರ್ಎಸ್ಎಸ್ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೆ ಬಿಜೆಪಿ?. ಎಲ್ಲ ರೀತಿಯ ಕೋಮುವಾದ ಮತ್ತು ದ್ವೇಷ ಸಮಾಜದ ರಚನೆಗೆ ಹಾನಿಕಾರಕ. ಅದನ್ನು ನಿಗ್ರಹಿಸುವ ಕೆಲಸ ಆಗಬೇಕೆಂದು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಹೇಳಿಕೆ ನೀಡಿದ್ದು, ಯಾವುದೇ ಸಂಸ್ಥೆ ದೇಶದ ಶಾಂತಿಗೆ ದಕ್ಕೆ ತಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು. ಕಾನೂನು ಎಲ್ಲರಿಗೂ ಒಂದೇ ಆಗಬೇಕು. ರಾಜ್ಯ, ದೇಶ ಭದ್ರತೆಗೆ ದಕ್ಕೆ ತರುವವರು, ಯಾರು ಸಮಾಜದಲ್ಲಿ ಪ್ರಚೋದನೆ, ಅಶಾಂತಿ ಮೂಡಿಸುತ್ತರೋ, ಅವರೆಲ್ಲ ಬ್ಯಾನ್ ಆಗಬೇಕು ಎಂದು ಹೇಳಿದ್ದಾರೆ.