ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಇದೀಗ ಪಕ್ಷ ಬಿಡುವವರಿಂದ ರಾಜ್ಯ ನಾಯಕರಿಗೆ ಹೊಸದೊಂದು ತಲೆಬಿಸಿ ಆರಂಭವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆ 2023 ರಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂಬ ಮಾತು ಹೆಚ್ಚಿನ ನಾಗರಿಕರ ಬಾಯಿಂದ ಕೇಳಿ ಬರುತ್ತಿದ್ದರೂ ಸಹ, ಬಿಜೆಪಿ ನಾಯಕರ ಆಮಿಷ ಹಾಗೂ ತಂತ್ರಗಾರಿಕೆಗೆ ಸಾಕಷ್ಟು ಕಾಂಗ್ರೆಸ್ ನಾಯಕರು ಮರುಳಾಗುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವವನ್ನು ಪ್ರಶ್ನಿಸಿ ಹಲವು ಹಿರಿಯ ಕಾಂಗ್ರೆಸ್ಸಿಗರು ಪಕ್ಷ ಬಿಟ್ಟು ಹೊರ ನಡೆಯುತ್ತಿದ್ದಾರೆ.
ರಾಜ್ಯದಲ್ಲಿ ಸಹ ಈ ಒಂದು ಬದಲಾವಣೆಯ ಪ್ರಭಾವ ಸಹ ಕೊಂಚಮಟ್ಟಿಗೆ ಪರಿಣಾಮ ಬೀರುತ್ತಿದೆ. ಆದರೆ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು ಪಕ್ಷ ಬಿಡಲು ಮುಂದಾಗಿರುವ ವಿಚಾರದಲ್ಲಿ ಸ್ಥಳೀಯರ ಅಸಮಾಧಾನ, ಜವಾಬ್ದಾರಿ ಹಂಚಿಕೆಯಲ್ಲಿ ಆಗಿರುವ ವ್ಯತ್ಯಯ, ಜಿಲ್ಲಾ ಮಟ್ಟದಲ್ಲಿ ತಮ್ಮನ್ನು ಪರಿಗಣಿಸದೆ ಬೇರೆ ನಾಯಕರಿಗೆ ಮಣೆ ಹಾಕುತ್ತಿರುವುದು ಮತ್ತು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವುದು. ಇದೆಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ತಮಗೆ ಅಧಿಕಾರ ಸಿಗುತ್ತಿಲ್ಲ ಎಂಬ ಬೇಸರದಿಂದ ಪಕ್ಷ ಬಿಡಲು ಮುಂದಾಗಿರುವವರೇ ಹೆಚ್ಚಾಗಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಬಿಟ್ಟು ಹೋಗುವ ಕಾಂಗ್ರೆಸ್ ನಾಯಕರನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಮಾಜಿ ಸಂಸದ ಮುದ್ದಹನುಮೇಗೌಡ ಪಕ್ಷ ಬಿಟ್ಟು ತೆರಳಿದ್ದಾರೆ. ಇದೀಗ ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಮಾಜಿ ಸಚಿವ ಎಂಆರ್ ಸೀತಾರಾಮ್ ಮತ್ತಿತರ ಕಾಂಗ್ರೆಸ್ ನಾಯಕರು ಪಕ್ಷ ಬಿಡುವ ನಿಟ್ಟಿನಲ್ಲಿ ಬಲವಾದ ಚಿಂತನೆ ನಡೆಸಿದ್ದು, ಇವರನ್ನು ತಡೆಯಲು ಕಾಂಗ್ರೆಸ್ ನಾಯಕರು ನಡೆಸಿರುವ ಪ್ರಯತ್ನ ನಿರೀಕ್ಷಿತ ಫಲ ಕಾಣುತ್ತಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರು ಮಾತ್ರವಲ್ಲದೆ, ರಾಷ್ಟ್ರೀಯ ನಾಯಕ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಸಹ ಕಾಂಗ್ರೆಸ್ ನಾಯಕರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಿದ್ದಾರೆ.
ಡಿಕೆಶಿ ಕ್ರಮದ ಎಚ್ಚರಿಕೆ.. ಕಾಂಗ್ರೆಸ್ ನಾಯಕರು ಪಕ್ಷ ಬಿಡುವುದನ್ನು ತಡೆಯುವುದೇ ಇದೀಗ ರಾಜ್ಯನಾಯಕರಿಗೆ ದೊಡ್ಡ ಸವಾಲಾಗಿದ್ದು, ಚುನಾವಣೆಗೆ ಒಂದು ವರ್ಷ ಕಾಲ ಮಿತಿ ಇರುವ ಸಂದರ್ಭದಲ್ಲಿ ಸಂಘಟನೆಗೆ ಹೊತ್ತು ಕೊಡುವ ಜೊತೆಗೆ ಬಿಟ್ಟು ಹೋಗುವರನ್ನು ಉಳಿಸಿಕೊಳ್ಳುವುದು ಸಹ ದೊಡ್ಡ ಸವಾಲಾಗಿ ಕಾಡಿದೆ. ಈಗಾಗಲೇ ಪಕ್ಷ ಬಿಟ್ಟು ಹೋಗುವವರು ಮತ್ತು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಯಾರೇ ಪಕ್ಷದ ವಿರುದ್ಧ ನಡೆದುಕೊಂಡರು ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಮಾತನ್ನು ಆಡಿದ್ದಾರೆ. ಆದರೆ ಬಿಜೆಪಿಯ ಆಮಿಷ ಹಾಗೂ ಕಾಂಗ್ರೆಸ್ ಪಕ್ಷದ ಮೇಲಿನ ಮುನಿಸು ಪಕ್ಷ ಬಿಡುವವರನ್ನು ತಡೆಯುತ್ತದಾ ಎನ್ನುವುದನ್ನು ಕಾದು ನೋಡಬೇಕಿದೆ.