ಬೆಂಗಳೂರು: ಸೈದ್ಧಾಂತಿಕ, ಸಂಘಟನೆ, ರಾಜಕೀಯವಾಗಿ ಚುನಾವಣೆ ಎದುರಿಸಲು ರೋಡ್ಮ್ಯಾಪ್ ಸಿದ್ಧಪಡಿಸುವ ಕೆಲಸ ಸಂಕಲ್ಪ ಶಿಬಿರದಲ್ಲಿ ನಡೆಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದರು. ಬೆಂಗಳೂರು ಹೊರವಲಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಂಕಲ್ಪ ಚಿಂತನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಏರಲು ಜನರ ಆಶೀರ್ವಾದ ಇರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಜನರನ್ನು ಮಾತನಾಡಿಸಿದಾಗ ಈ ಅಂಶ ಗಮನಿಸಿದ್ದು, ಅಧಿಕಾರಕ್ಕೆ ಬರುವ ನನಗೆ ವಿಶ್ವಾಸವಿದೆ. ಉದಯಪುರದ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಸಂಘಟನೆಯ ಎಲ್ಲ ಖಾಲಿ ಹುದ್ದೆ ಭರ್ತಿ ಮಾಡುವುದು. ಅದೇ ಪ್ರಕಾರ ಹದಿನೈದು ದಿನದಲ್ಲಿ ಕೆಪಿಸಿಸಿ ಹಂತದಲ್ಲಿ ಭರ್ತಿ ಮಾಡಲಾಗುತ್ತದೆ ಎಂದರು.
ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಘಟಕಗಳಿಂದ ವಾರ್ರೂಮ್ ಸ್ಥಾಪನೆ ಮಾಡಲಾಗುವುದು. ಎಐಸಿಸಿಯ ನಿರ್ದೇಶನದಂತೆ ಪದಾಧಿಕಾರಿಗಳಲ್ಲಿ ಶೇಕಡಾ ಐವತ್ತು ಮಂದಿ ಐವತ್ತರ ಒಳಗಿನವರಿರಬೇಕು. ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತ ಮಹಿಳೆಯರನ್ನು ಸಮಿತಿಗಳಲ್ಲಿ ಆದ್ಯತೆ ಮೇಲೆ ಅವಕಾಶ ಕೊಡಬೇಕು. ಟಿಕೆಟ್ ಹಂಚಿಕೆಯಲ್ಲೂ ಇದನ್ನು ಪಾಲಿಸಬೇಕು. ಜಿಲ್ಲಾಧ್ಯಕ್ಷ, ಬ್ಲಾಕ್ ಅಧ್ಯಕ್ಷ ಸೇರಿ ಸಂಘಟನೆಯಲ್ಲಿ ಐದು ವರ್ಷದ ಜವಾಬ್ದಾರಿ ಮುಗಿದ ಕೂಡಲೇ ಬೇರೆಯವರಿಗೆ ಅವಕಾಶ ಕೊಡಬೇಕೆಂದು ಹೇಳಿದರು.
ಒಂದು ಕುಟುಂಬ, ಒಂದು ಟಿಕೆಟ್:ಒಂದೇ ಕುಟುಂಬಕ್ಕೆ ಒಂದೇ ಟಿಕೆಟ್ ಕೊಡುವ ತೀರ್ಮಾನದಲ್ಲಿ ಸ್ಪಷ್ಟನೆ ಇದೆ. ಎಲ್ಲರಿಗೂ ಟಿಕೆಟ್ ತಿರಸ್ಕಾರಿಸಲಾಗಲ್ಲ. ಕೆಲವರು ಪಕ್ಷದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆದರೆ, ನನ್ನ ಮಗ ಅಮೆರಿಕದಿಂದ ಬಂದಿದ್ದಾನೆ. ಇನ್ನೆಲ್ಲಿಂದಲೋ ಬಂದಿದ್ದಾನೆ. ನನ್ನ ಪತ್ನಿಗೆ ಟಿಕೆಟ್ ಕೊಡಬೇಕೆಂಬ ಬೇಡಿಕೆಗೆ ಇನ್ಮುಂದೆ ಅವಕಾಶ ಕೊಡಲ್ಲ. ಹೀಗೆ ಅವಕಾಶ ಬೇಕಿದ್ದರೆ ಪಕ್ಷದಲ್ಲಿ ಐದು ವರ್ಷ ಸೇವೆ ಮಾಡಿರಬೇಕು. ಪ್ರತಿ ತಿಂಗಳು ಡಿಸಿಸಿ ಸಭೆ ಕಡ್ಡಾಯ. ಆರು ತಿಂಗಳಿಗೊಮ್ಮೆ ಜನರಲ್ ಬಾಡಿ ಪಿಸಿಸಿ ಆಗಬೇಕೆಂದು ಸುರ್ಜೇವಾಲಾ ಹೇಳಿದರು.
ಅಸಮಾಧಾನದಿಂದ ಪಕ್ಷಕ್ಕೆ ಹಾನಿ:ಜಿಲ್ಲಾ ಹಂತದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಯಬೇಕು. ನಾಲ್ಕು ನಿಮಿಷದ ಫೇಮ್‌ಗಾಗಿ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಬೇಡಿ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಏನೇ ಇದ್ದರೂ ನಾಯಕರ ಜೊತೆ ಚರ್ಚೆ ಮಾಡಿ ಎಂಬ ಸೂಚಿಸಿದರು.