ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗಳಿಸಿ, ಭರ್ಜರಿ ಬಹುಮತದಿಂದ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನು ಪೂರೈಸುತ್ತಿದೆ. ಸರ್ಕಾರ ರಚನೆ, ಮುಖ್ಯಮಂತ್ರಿ ಆಯ್ಕೆ ಕಸರತ್ತು, ಸಚಿವ ಸ್ಥಾನಗಳಿಗೆ ಲಾಬಿ ಸೇರಿದಂತೆ ಮತ್ತಿತರ ಗೊಂದಲದಲ್ಲೇ ಕಾಂಗ್ರೆಸ್ ನಾಯಕರು ಕೆಲದಿನಗಳನ್ನು ದೂಡಿದ್ದರು. ಹೈಕಮಾಂಡ್ ಮಧ್ಯಪ್ರವೇಶ ಮಾಡಿದ್ದರಿಂದ ಸರ್ಕಾರ ರಚನೆಯಾಯಿತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ನಂತರ ಸ್ವಪಕ್ಷೀಯ ಶಾಸಕರ ಅಸಮಾಧಾನದ ಬೇಗುದಿಯಲ್ಲೇ ಸಂಪುಟವೂ ರಚನೆಯಾಯಿತು.
ಸರ್ಕಾರ ಇದೀಗ ತನ್ನ ಜನಪ್ರಿಯ ಗ್ಯಾರಂಟಿ ಯೋಜನೆಗಳ ಜಾರಿಯ ಸವಾಲು ಎದುರಿಸುತ್ತಿದೆ. ಈ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಅಭಿವೃದ್ದಿ ಕಾಮಗಾರಿಗಳ ಕಡೆ ಸರ್ಕಾರದ ಗಮನ ಹರಿಸಿಲ್ಲ. ತಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ವಿಚಾರದಲ್ಲೂ ವಿಳಂಬ ಆಗುತ್ತಿರುವ ಬಗ್ಗೆ ಇತ್ತೀಚೆಗೆ ಆಡಳಿತ ಪಕ್ಷದ ಶಾಸಕರೇ ತಗಾದೆ ತೆಗೆದಿದ್ದು, ಸಿಎಂ ಸಿದ್ದರಾಮಯ್ಯ ತಣ್ಣಗಾಗಿಸಿದ್ದಾರೆ.
ಗುತ್ತಿಗೆದಾರರಿಂದ ಕಮಿಷನ್ ಆರೋಪ: ಶಾಸಕರ ಅಸಮಾಧಾನ ಮುಗಿದು ನಿಟ್ಟುಸಿರು ಬಿಡುತ್ತಿರುವ ವೇಳೆಗೆ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಮರ ಆರಂಭಿಸಿದ್ದು, ಈ ಹಿಂದೆ ಬೆಂಗಳೂರು ನಗರವೂ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಸಿದ ಕಾಮಗಾರಿಗಳ ಬಿಲ್ ಹಣ ಬಿಡುಗಡೆ ಮಾಡಲು ಕಮಿಷನ್ ನೀಡುವಂತೆ ಒತ್ತಾಯ ಮಾಡಲಾಗುತ್ತಿದೆ ಎಂಬ ಆರೋಪದೊಂದಿಗೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಸಚಿವ ಚಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ': ಗುತ್ತಿಗೆದಾರರ ಪೈಕಿ ಕೆಲವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನೇರ ಆರೋಪ ಮಾಡಿದ್ದು, ಇದೇ ಅವಕಾಶವನ್ನು ಬಳಸಿಕೊಂಡ ಬಿಜೆಪಿ ಹಾಗೂ ಜೆಡಿಎಸ್ ಹೋರಾಟಕ್ಕೆ ಮುಂದಾಗಿದೆ. ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದು, ಸಿಐಡಿ ತನಿಖೆ ನಡೆಯುತ್ತಿದೆ.
ಮತ್ತೊಂದೆಡೆ, ವಿಧಾನ ಪರಿಷತ್ತಿನ 3 ಸ್ಥಾನಗಳಿಗೆ ಸದಸ್ಯರ ನಾಮಕರಣ ವಿಚಾರವೂ ಕಾಂಗ್ರೆಸ್ನಲ್ಲಿ ಮತ್ತೆ ಅತೃಪ್ತಿ ಹುಟ್ಟುಹಾಕಿತ್ತು. ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ತನ್ನದೇ ಕಾರ್ಯಕ್ರಮಗಳನ್ನು ಒಳಗೊಂಡ ಮುಂಗಡ ಪತ್ರವನ್ನು ವಿಧಾನಮಂಡಲದ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಸಾಂವಿಧಾನಿಕ ಕರ್ತವ್ಯ. ಅದಕ್ಕೂ ಮುನ್ನ ಅಧಿಕಾರದಲ್ಲಿದ್ದ ಇನ್ನೊಂದು ರಾಜಕೀಯ ಪಕ್ಷ ತನ್ನ ಅಧಿಕಾರವಧಿಯಲ್ಲಿ ಬಜೆಟ್ ಮಂಡಿಸಿ ಒಪ್ಪಿಗೆ ಪಡೆದಿದ್ದರೂ ನಂತರ ಚುನಾವಣೆಯಲ್ಲಿ ಗೆದ್ದು ಬಂದು ಅಧಿಕಾರಕ್ಕೇರುವ ಪಕ್ಷ ತನ್ನದೇ ಆದ ಕಾರ್ಯಕ್ರಮಗಳನ್ನೊಳಗೊಂಡ ಬಜೆಟ್ ಮಂಡಿಸಿ ಜಾರಿಗೆ ತರುವುದು, ಹಿಂದಿನ ಸರ್ಕಾರ ಕೈಗೊಂಡಿದ್ದ ಕೆಲವೊಂದು ಯೋಜನೆಗಳು, ಕಾರ್ಯಕ್ರಮಗಳನ್ನು ಕೈಬಿಡುವುದು ಸಹಜ ರಾಜಕೀಯ ಪ್ರಕ್ರಿಯೆಯಾಗಿದೆ.
ಅಕ್ರಮಗಳ ವಿರುದ್ಧ ತನಿಖೆ: ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಶೇ.40 ರ ಕಮಿಷನ್ ಆರೋಪ ಮಾಡಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಆಗ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಬಿಜೆಪಿ ವಿರುದ್ಧ ಹೋರಾಟ ನಡೆಸಿದ್ದಲ್ಲದೆ, ಚುನಾವಣೆಯಲ್ಲೂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸ್ಪರ್ಧೆ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಬಂದು ಮೂರು ತಿಂಗಳು ಕಳೆದಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.