ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾಹಿತಿ ಬೆಂಗಳೂರು:ರಾಜ್ಯ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ನಾವು ಸುಪ್ರೀಂಕೋರ್ಟ್ ಆದೇಶಿಸಿದಂತೆ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇದೇ ವೇಳೆ ಅವರು, ಕಾನೂನು ತಜ್ಞರ ಸಲಹೆ ಪಡೆದುಕೊಳ್ಳುವವರೆಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ನೀರು ಹರಿಸುತ್ತೇವೆ. ಈ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಕಾವೇರಿ ನದಿ ನೀರು ವಿಚಾರವಾಗಿ ಇಂದು ಕರೆಯಲಾಗಿರುವ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಬಿದ್ದಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದೆ. ಅಣೆಕಟ್ಟೆಗಳಲ್ಲಿ ನೀರಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗುವ ಸಾಧ್ಯತೆ ಇದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಸಾಧ್ಯವಿಲ್ಲ ಎಂದರು.
ಒಟ್ಟಾರೆ 162 ಟಿಎಂಸಿ ನೀರಿನ ಅವಶ್ಯಕತೆ ಇದ್ದು, ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯ ಇರುವ ನೀರಿನ ಪ್ರಮಾಣ ಕೇವಲ 53 ಟಿಎಂಸಿ, 37 ಟಿಎಂಸಿ ನೀರು ಹರಿಸಿದರೆ ಉಳಿಯುವುದು ಕೇವಲ 20 ಕ್ಕೂ ಕಡಿಮೆ ಟಿಎಂಸಿ ನೀರು ಹೀಗಾಗಿ ನಾವು ನೀರು ಹರಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಸಿಎಂ ಮಾಧ್ಯಮಗೋಷ್ಠಿಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಇರುವ ಸ್ಥಿತಿಯನ್ನು ಅಂಕಿ- ಸಂಖ್ಯೆ ಸಮೇತ ವಿವರಣೆ ನೀಡಿದರು.
5 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ. ಸುಪ್ರೀಂಕೋರ್ಟ್ನ ಹಿಂದಿನ ಆದೇಶವನ್ನೂ ಪಾಲನೆ ಆಗುವುದಿಲ್ಲ. ನೀರಿನ ಕೊರತೆ ಬಗ್ಗೆ ನಾವು ಸುಪ್ರೀಂಕೋರ್ಟ್‌ಗೆ ಮೊರೆ ಹೋಗುತ್ತೇವೆ. ಕಾವೇರಿ ನೀರು ನಿಯಂತ್ರಣ ಸಮಿತಿಯ ಮುಂದೆಯೂ ಮಗದೊಮ್ಮೆ ಅರ್ಜಿ ಸಲ್ಲಿಸಿ ವಾದ ಮಂಡಿಸಲಾಗುವುದು. ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಈ ವಿಷಯದ ಬಗ್ಗೆ ಚರ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಸ್ತುತ ನಾವು ಕಾವೇರಿ ನೀರು ನಿರ್ವಹಣಾ ಮಂಡಳಿ ಸಿಡಬ್ಲ್ಯುಸಿಆರ್ ಗೆ ಅವರು ನೀಡಿದ ನಿರ್ದೇಶನವನ್ನು ಮತ್ತೊಮ್ಮೆ ಮರು ಪರಿಶೀಲನೆ ಮಾಡುವಂತೆ ಕೋರಿ ಮರು ಅರ್ಜಿ ಸಲ್ಲಿಸುತ್ತೇವೆ. ಈ ಬಗ್ಗೆ ಸುಪ್ರೀಂಕೋರ್ಟ್ಗೂ ಅರ್ಜಿ ಸಲ್ಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಕಾವೇರಿ ವಿವಾದದ ಬಗ್ಗೆ ಚರ್ಚಿಸಲು ಹಾಗೂ ರಾಜ್ಯದಲ್ಲಿನ ಪರಿಸ್ಥಿತಿಯನ್ನು ವಿವರಿಸಲು ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಈ ಬಗ್ಗೆ ಶೀಘ್ರ ಒಂದು ತೀರ್ಮಾನಕ್ಕೆ ಬರಲಾಗುವುದು. ದೆಹಲಿಯಲ್ಲಿ ಎಲ್ಲ ಸಂಸದರನ್ನು ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಿಎಂ ಸರ್ವಪಕ್ಷ ಸಭೆ ಬಳಿಕ ಮಾಧ್ಯಮಗಳಿಗೆ ವಿವರಣೆ ನೀಡಿದರು.
ಇದನ್ನೂ ಓದಿ:Cauvery water issue: ಅನ್ಯ ವಿಚಾರಗಳನ್ನು ಪಕ್ಕಕ್ಕಿಟ್ಟು ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಸಲಹೆ ನೀಡಿ: ತುರ್ತು ಸಭೆಯಲ್ಲಿ ಮನವಿ ಮಾಡಿದ ಡಿಸಿಎಂ