ಬೆಂಗಳೂರು: ಇತ್ತೀಚೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋ ತುಣುಕು ಗೊಂದಲಕ್ಕೆ ಕಾರಣವಾಗಿದೆ. ''ಎಲ್ಲಿಂದ ತರಲಿ ದುಡ್ಡು.. ಚುನಾವಣೆಯಲ್ಲಿ ಏನೋ ಹೇಳಿರುತ್ತಿವಪ್ಪಾ, ಹೇಳಿದಂತೆ ನಡೆದುಕೊಳ್ಳೇಕೆ ಆಗುತ್ತಾ'' ಎಂಬ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ಹೇಳಿಕೆ ವಿಚಾರವಾಗಿ ತೆಲಂಗಾಣದ ಬಿಆರ್ಎಸ್ ಶಾಸಕ, ಮಾಜಿ ಸಚಿವ ಕೆ.ಟಿ.ರಾಮರಾವ್ (ಕೆಟಿಆರ್) ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಯಾವುದು ಸತ್ಯ ಎಂದು ಪರಿಶೀಲಿಸುವುದು ನಿಮಗೆ ಗೊತ್ತಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2009ರ ಡಿಸೆಂಬರ್ನಲ್ಲಿ ಸಾಲ ಮನ್ನಾ ಮಾಡುವ ಕುರಿತು ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಮಾತನಾಡುವಾಗ, ''ಯಡಿಯೂರಪ್ಪ ಏನ್ ಹೇಳಿದ್ದಾರೆ ಗೊತ್ತಾ?, ನಮ್ಮ ಹತ್ರ ಪ್ರಿಟಿಂಗ್ ಮಿಷನ್ ಇದೆಯಾ?, ಅಲ್ಲಿಂದ ತರಲಿ ದುಡ್ಡು, ನಾವು ಏನೋ ಚುನಾವಣೆಯಲ್ಲಿ ಹೇಳಿರುತ್ತಿವಪ್ಪಾ, ಹೇಳಿದಂತೆ ನಡೆದುಕೊಳ್ಳೇಕೆ ಆಗುತ್ತಾ'' ಎಂದು ಯಡಿಯೂರಪ್ಪ ಅವರ ಶೈಲಿಯಲ್ಲಿ ಹೇಳಿದ್ದಾರೆ. ಆದರೆ, ಈ ಸಿದ್ದರಾಮಯ್ಯನವರ ಹೇಳಿಕೆ ವಿಡಿಯೋದಲ್ಲಿ ''ಅಲ್ಲಿಂದ ತರಲಿ ದುಡ್ಡು, ನಾವು ಏನೋ ಚುನಾವಣೆಯಲ್ಲಿ ಹೇಳಿರುತ್ತಿವಪ್ಪಾ, ಹೇಳಿದಂತೆ ನಡೆದುಕೊಳ್ಳೇಕೆ ಆಗುತ್ತಾ'' ಎಂಬ ತುಣುಕು ಮಾತ್ರ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ವಿಡಿಯೋ ತುಣುಕಿನ ಪೋಸ್ಟ್ ಶೇರ್ ಮಾಡಿರುವ ಬಿಆರ್ಎಸ್ ನಾಯಕ ಕೆಟಿಆರ್, ''ಚುನಾವಣಾ ಭರವಸೆ/ಗ್ಯಾರಂಟಿಗಳನ್ನು ಈಡೇರಿಸಲು ಹಣವಿಲ್ಲ ಎಂದ ಕರ್ನಾಟಕ ಸಿಎಂ!. ಚುನಾವಣೆಯಲ್ಲಿ ಯಶಸ್ವಿಯಾಗಿ ಜನರನ್ನು ವಂಚಿಸಿದ ನಂತರ ತೆಲಂಗಾಣಕ್ಕೂ ಇದೇ ಭವಿಷ್ಯದ ಮಾದರಿಯೇ?, ವಿಲಕ್ಷಣ ಹೇಳಿಕೆಗಳನ್ನು ನೀಡುವ ಮೊದಲು ನೀವು ಮೂಲ ಸಂಶೋಧನೆ ಮತ್ತು ಯೋಜನೆಯನ್ನು ಮಾಡಬೇಕಲ್ಲವೇ?'' ಎಂದು ಬರೆದುಕೊಂಡಿದ್ದಾರೆ.