ಬೆಂಗಳೂರು:ರಾಜ್ಯದಲ್ಲಿ ಆಗಾಗ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಲೇ ಇದೆ. ಈಗಲೂ ಅಂತಹದ್ದೇ ಸನ್ನಿವೇಶ ರಾಜ್ಯ ಬಿಜೆಪಿ ಪಾಳಯದಲ್ಲಿ ಎದ್ದಿದೆ.
ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿ ಸಂಪುಟ ವಿಸ್ತರಣೆ ಮಾಡಿದ ನಂತರ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಲೇ ಇದೆ. ಸಂಪುಟ ರಚನೆ, ವಿಸ್ತರಣೆ ವೇಳೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನ, ನಾಯಕತ್ವ ಬದಲಾವಣೆಯ ಹೇಳಿಕೆಯವರೆಗೂ ತಂದು ನಿಲ್ಲಿಸಿತ್ತು.
ನಂತರ ಉಪ ಚುನಾವಣೆ ಘೋಷಣೆಯಾದಾಗ ಡಿಸೆಂಬರ್‌ನಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎನ್ನುವ ಹೇಳಿಕೆ ಪಕ್ಷದ ವಲಯದಲ್ಲೇ ಹರಿದಾಡಿತ್ತು. ನಂತರ ಬಜೆಟ್ ಮಂಡಿಸುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಗುತ್ತದೆ, ಮುಖ್ಯಮಂತ್ರಿಯಾಗಿ ಒಂದು ವರ್ಷವಾಗುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ ಎನ್ನುವ ಮಾತು ಕೇಳಿ ಬಂದವು. ಅಧಿವೇಶನ ನಡೆಯುವ ವೇಳೆಯಲ್ಲಿಯೇ ಮುಖಂಡರಾದ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ನಿವಾಸದಲ್ಲಿ ಉತ್ತರ ಕರ್ನಾಟಕ ಶಾಸಕರ ಸಭೆ ನಾಯಕತ್ವ ಬದಲಾವಣೆ ಯತ್ನ ನಡೆಯುತ್ತಿದೆ ಎನ್ನುವ ಹೇಳಿಕೆಗೆ ಪುಷ್ಟಿ ನೀಡಿತ್ತು.
ಹಿಂದಿನಿಂದಲೇ ಬಸನಗೌಡ ಪಾಟೀಲ್ ಯತ್ನಾಳ್ ನಾಯಕತ್ವದ ಬಗ್ಗೆ ಹೇಳಿಕೆ ನೀಡಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿ, ಕೇಂದ್ರದ ಬಗ್ಗೆಯೂ ಹೇಳಿಕೆ ನೀಡಿ ಪಕ್ಷಕ್ಕೆ ವಿವರಣೆ ನೀಡಿದ ಘಟನೆಯೂ ನಡೆದಿತ್ತು. ಆದರೂ ಇಷ್ಟಕ್ಕೆ ಸುಮ್ಮನಾಗದ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮತ್ತೆ ನಾಯಕತ್ವ ಬದಲಾವಣೆ ವಿಷಯ ಪ್ರಸ್ತಾಪಿಸಿದ್ದಾರೆ.
ಯಡಿಯೂರಪ್ಪ ಕೇಂದ್ರದ ನಾಯಕರಿಗೂ ಬೇಡವಾಗಿದ್ದಾರೆ, ಉತ್ತರ ಕರ್ನಾಟಕದ ಮುಖಂಡರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಈ ಬಾರಿ ಸಿಎಂ ಬದಲಾವಣೆ ಖಚಿತ ಎನ್ನುವ ಹೇಳಿಕೆ ನೀಡಿ ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಯತ್ನಾಳ್ ಹೇಳಿಕೆ ನೀಡುತ್ತಿದ್ದಂತೆ ಬಿಜೆಪಿ ನಾಯಕರು, ಸಂಪುಟ ಸಹೋದ್ಯೋಗಿಗಳು ಎಚ್ಚೆತ್ತುಕೊಂಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸಿಎಂ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಸಿಎಂ ಆಪ್ತರಾದ ಎಂ ಪಿ ರೇಣುಕಾಚಾರ್ಯ, ಎಸ್.ಆರ್.ವಿಶ್ವನಾಥ್ ಯತ್ನಾಳ್ ವಿರುದ್ಧ ಮುಗಿಬಿದ್ದಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವತ್ಥ್ ನಾರಾಯಣ, ಸಚಿವರಾದ ಅಶೋಕ್, ಗೋಪಾಲಯ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸೇರಿದಂತೆ ಬಹುತೇಕ ನಾಯಕರು ಸಿಎಂ ಬೆನ್ನಿಗೆ ನಿಂತಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ, ಉಳಿದ ಅವಧಿಯನ್ನು ಯಡಿಯೂರಪ್ಪ ಪೂರ್ಣ ಮಾಡಲಿದ್ದಾರೆ. ಅವರೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿಯೇ ಜನರ ಮುಂದೆ ಹೋಗಿದ್ದೆವು ಹಾಗಾಗಿ, ಜನಾಶೀರ್ವಾದ ಯಡಿಯೂರಪ್ಪ ಪರವಿದ್ದು, ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿಕೆ, ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.
ಯತ್ನಾಳ್ ವಿರುದ್ಧ ಸಾಫ್ಟ್ ಕಾರ್ನರ್:
ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲ ಬಿರುಗಾಳಿ ಏಳಲು ಯತ್ನಾಳ್ ನೀಡಿದ್ದ ಹೇಳಿಕೆ ಕಾರಣವಾಗಿದ್ದು, ಅನುದಾನ ನೀಡುತ್ತಿಲ್ಲ ಎನ್ನುವ ಆರೋಪ ಕೂಡ ಮಾಡಿದ್ದಾರೆ. ಇಷ್ಟೆಲ್ಲಾ ಬಹಿರಂಗವಾಗಿ ಆಗುತ್ತಿದ್ದರು ಏನೂ ಆಗುತ್ತಿಲ್ಲವೇನೋ ಎನ್ನುವ ರೀತಿಯಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷರು ಮೃದು ಧೋರಣೆ ತಳೆದಿರುವುದು ಅನುಮಾನಕ್ಕೆ ಎಡೆ ಮಾಡಿದೆ. ಈ ಹಿಂದೆ ಕೇಂದ್ರದ ವಿರುದ್ಧ ಹೇಳಿಕೆ ನೀಡಿದಾಗ ಶೋಕಾಸ್ ನೋಟಿಸ್ ನೀಡಿದ್ದ ಕಟೀಲ್, ಈಗ ಪಕ್ಷದಲ್ಲಿ ಚರ್ಚಿಸಿ ಶಿಸ್ತು ಕ್ರಮದ ನಿರ್ಧಾರ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಎಲ್ಲೋ ಒಂದು ಕಡೆ ಯತ್ನಾಳ್ ಪರ ಪಕ್ಷ ಸಾಫ್ಟ್ ಕಾರ್ನರ್ ಹೊಂದಿದೆಯಾ ಎನ್ನುವ ಅನುಮಾನವನ್ನೂ ಹುಟ್ಟಿಸಿದೆ.
ವಯೋಮಿತಿ ಲಾಭಕ್ಕೆ ಮುಂದಾದರಾ ನಾಯಕರು?:
ಇಡೀ ದೇಶದಲ್ಲಿ ಬಿಜೆಪಿ ಒಂದು ನಿಯಮ ಪಾಲಿಸಿಕೊಂಡು ಬರುತ್ತಿದ್ದು, 75 ವರ್ಷ ದಾಟಿದವರಿಗೆ ಅಧಿಕಾರ ನೀಡದ ನಿಯಮ ಜಾರಿಗೊಳಿಸಿದೆ. ಪ್ರಧಾನಿ ಮೋದಿ ತವರು ಗುಜರಾತ್ ಸೇರಿ ಎಲ್ಲಾ ರಾಜ್ಯದಲ್ಲಿಯೂ ಇದು ಅನುಷ್ಠಾನಕ್ಕೆ ತರಲಾಗಿದ್ದು, ಕರ್ನಾಟಕ ಮಾತ್ರ ಇದಕ್ಕೆ ಹೊರತಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವಾಗಲೇ 75 ವರ್ಷ ದಾಟಿದ್ದರು, ಅನ್ಯ ಮಾರ್ಗವಿಲ್ಲದೇ ಹೈಕಾಂಡ್ ಒಪ್ಪಬೇಕಾಯಿತು. ಈಗ 78 ವರ್ಷ ದಾಟಿದ್ದರೂ ಯಡಿಯೂರಪ್ಪ ಅಧಿಕಾರದಿಂದ ಇಳಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈಗ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ರಾಜ್ಯ ಬಿಜೆಪಿಯ ಒಂದು ತಂಡ ಮುಂದಾಗಿದ್ದು, ಪದೇಪದೆ ನಾಯಕತ್ವ ಬದಲಾವಣೆಯಂತಹ ಹೇಳಿಕೆ ಮೊಳಗಿಸುತ್ತಿದೆ ಎನ್ನುವ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಹರಿದಾಡುತ್ತಿವೆ.