ಬೆಂಗಳೂರು: ರಾಜ್ಯದಲ್ಲಿ ನಾಳೆ ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ನೂತನ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಪದಗ್ರಹಣ ಸಮಾರಂಭಕ್ಕೆ ಕಾಂಗ್ರೆಸ್ ವರಿಷ್ಠರು ಹಾಗೂ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. 2018ರಲ್ಲಿ ಮೈತ್ರಿ ಸರ್ಕಾರ ರಚನೆಯ ವೇಳೆ ವಿಧಾನಸೌಧ ಮೆಟ್ಟಿಲುಗಳ ಮೇಲೆ ನಡೆದಿದ್ದ ಸಮಾರಂಭದಂತೆ ಈ ಬಾರಿ ಕಂಠೀರವ ಕ್ರೀಡಾಂಗಣದಲ್ಲಿ ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟು ಅನಾವರಣಗೊಳ್ಳಲಿದೆ. ಮಧ್ಯಾಹ್ನ 12.30ಕ್ಕೆ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಪದಗ್ರಹಣಕ್ಕೆ ಆಗಮಿಸುವ ಗಣ್ಯರು: ಎಐಸಿಸಿ ವರಿಷ್ಠ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ/ ಎಐಸಿಸಿ ನಾಯಕ ರಾಹುಲ್ ಗಾಂಧಿ, ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್, ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್, ಬಿಹಾರ ಸಿಎಂ ನಿತೀಶ್ ಕುಮಾರ್, ಚತ್ತೀಸ್ಗಡ ಸಿಎಂ ಭೂಪೇಶ್ ಬಘೇಲ್, ಹಿಮಾಚಲ ಪ್ರದೇಶ ಸಿಎಂ ಸುಖ್ವೀಂದರ್ ಸಿಂಗ್, ಪುದುಚೇರಿ ಸಿಎಂ ರಂಗಸ್ವಾಮಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಭಾಗಿಯಾಗಲಿದ್ದಾರೆ. 11 ಮಂದಿ ಗಣ್ಯರು ಪದಗ್ರಹಣದಲ್ಲಿ ಪಾಲ್ಗೊಳ್ಳುವ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.
ಗಣ್ಯರಿಗೆ Z+ ಕೆಟಗರಿ ಭದ್ರತೆ: ಕಾರ್ಯಕ್ರಮದಲ್ಲಿ ಭಾಗಿಯಾಗುವ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರು ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹಾಗೂ ವಿಐಪಿಗಳಿಗೆ Z+ ಹಾಗೂ Z ಕೆಟಗರಿಯ ಭದ್ರತೆಗೆ ಸಿದ್ಧತೆ ನಡೆಸಲಾಗಿದ್ದು CRPF, ASL ತಂಡ ಭದ್ರತೆ ವಹಿಸಲಿದೆ. 12 ಎಸಿಪಿ, 11 ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ಸ್, 11 ರಿಸರ್ವ್ ಸಬ್ ಇನ್ಸ್ಪೆಕ್ಟರ್ಸ್, 24 ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ಪೆಕ್ಟರ್ಸ್, 206 ಜನ ಕಾನ್ಸ್‌ಟೆಬಲ್ಸ್ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.