ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಜೊತೆ ಎಂಟು ಸಚಿವರ ಪದಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆಯುತ್ತಿದೆ. ಮಧ್ಯಾಹ್ನ 12:30 ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿನ್ನೆ ರಾತ್ರಿಯೇ ರಾಜ್ಯಕ್ಕೆ ಆಗಮಿಸಿ ಬೆಂಗಳೂರಿನ ಖಾಸಗಿ ತಾರಾ ಹೋಟೆಲ್ನಲ್ಲಿ ತಂಗಿದ್ದಾರೆ.
ಪದಗ್ರಹಣ ಸಮಾರಂಭದಲ್ಲಿ ಎಐಸಿಸಿ ವರಿಷ್ಠ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಎಐಸಿಸಿ ನಾಯಕ ರಾಹುಲ್ ಗಾಂಧಿ, ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಬಿಹಾರ ಸಿಎಂ ನಿತೀಶ್ ಕುಮಾರ್, ಚತ್ತೀಸ್‌ಗಢ ಸಿಎಂ ಭೂಪೇಶ್ ಬಫೇಲ್, ಹಿಮಾಚಲ ಪ್ರದೇಶ ಸಿಎಂ ಸುಖೀಂದರ್ ಸಿಂಗ್, ಪುದುಚೇರಿ ಸಿಎಂ ರಂಗಸ್ವಾಮಿ, ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಭಾಗಿಯಾಗಲಿದ್ದಾರೆ. ಸಮಾರಂಭದಲ್ಲಿ 30 ಮಂದಿ ಗಣ್ಯರು ವೇದಿಕೆ ಮೇಲೆ ಕುಳಿತುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಕೆಡಿಎಂನಲ್ಲಿ ಕಾರ್ಯಕ್ರಮ ವೀಕ್ಷಣೆಗೆ 40,000 ಮಂದಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಇದನ್ನೂ ಓದಿ :ಇಂದು ಸಿಎಂ, ಡಿಸಿಎಂ ಜೊತೆಗೆ ಬೆರಳೆಣಿಕೆಯ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ
ಈ ಮಧ್ಯೆ ಇಂದು ಸಿಇಟಿ ಪರೀಕ್ಷೆ ಸಹ ನಡೆಯುತ್ತಿದೆ. ಪದಗ್ರಹಣ ಸಮಾರಂಭ ನಿಯೋಜನೆಗೂ ಮುನ್ನವೇ ಪೂರ್ವ ನಿರ್ಧರಿತವಾಗಿ ಸಿಇಟಿ ಪರೀಕ್ಷೆ ದಿನಾಂಕ ಪ್ರಕಟವಾಗಿದ್ದು, ನಿಗದಿಯಂತೆ ಎಕ್ಸಾಂ ನಡೆಯಲಿದೆ. ಪದಗ್ರಹಣ ಸಮಾರಂಭದ ಸಂದರ್ಭದಲ್ಲಿಯೇ ಸಿಇಟಿ ಪರೀಕ್ಷೆ ಸಹ ನಡೆಯಲಿದ್ದು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸೂಚಿಸಿದ್ದಾರೆ.