ಬೆಂಗಳೂರು :ಕೇಂದ್ರ ಸಚಿವ ಸಂಪುಟ ಪುನರ್ರಚನೆಗೆ ಕ್ಷಣಗಣನೆ ಆರಂಭಗೊಂಡಿದೆ. ರಾಜ್ಯದಿಂದ ಇಬ್ಬರು ಸಂಸದರಿಗೆ ಈ ಸಾರಿ ಮೋದಿ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ. ಸಿಎಂ ಪುತ್ರ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಚಿತ್ರದುರ್ಗ ಸಂಸದ ಎ ನಾರಾಯಣ ಸ್ವಾಮಿ ಹೆಸರು ಮುಂಚೂಣಿಯಲ್ಲಿವೆ ಎನ್ನಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್ರಚನೆ ವೇದಿಕೆ ಸಜ್ಜುಗೊಂಡಿದೆ. ಸುರೇಶ್ ಅಂಗಡಿ ನಿಧನದಿಂದ ತೆರವಾದ ಒಂದು ಸ್ಥಾನಕ್ಕೆ ಲಿಂಗಾಯತ ಸಮುದಾಯದ ಸಂಸದರನ್ನೇ ನೇಮಕ ಮಾಡಲಾಗುತ್ತದೆ ಎಂದು ಪಕ್ಷದ ವಲಯದಲ್ಲಿ ಚರ್ಚಿತ ವಿಷಯವಾಗಿದೆ.
ಮೂಲಗಳ ಪ್ರಕಾರ ರಾಜ್ಯ ರಾಜಕೀಯ ವಿದ್ಯಮಾನಗಳು, ಪಕ್ಷದ ಮುಂದಿನ ಭವಿಷ್ಯ, ಸಂಘಟನೆ ದೃಷ್ಟಿಯಲ್ಲಿರಿಸಿಕೊಂಡು ಯಡಿಯೂರಪ್ಪ ಪುತ್ರ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೆಸರನ್ನು ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಮೂರು ಬಾರಿ ಸಂಸತ್ ಸದಸ್ಯರಾಗಿರುವ ರಾಘವೇಂದ್ರ ಒಮ್ಮೆ ಶಾಸಕರಾಗಿಯೂ ಆಯ್ಕೆಯಾಗಿದ್ದವರು.
ಲಿಂಗಾಯತ ಸಮುದಾಯವನ್ನು ಓಲೈಸಿಕೊಳ್ಳಲು ಸಿಎಂ ಪುತ್ರನಿಗೆ ಮಣೆ ಹಾಕಿದರೆ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎನ್ನುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ನಾಯಕತ್ವ ಬದಲಾವಣೆಯಂತಹ ಸಂದರ್ಭ ಎದುರಾದಲ್ಲಿ ಅದಕ್ಕೆ ಪೂರಕ ನಡೆಯೂ ರಾಘವೇಂದ್ರಗೆ ಕೇಂದ್ರ ಸಂಪುಟದಲ್ಲಿ ಅವಕಾಶ ಕೊಡುವುದೇ ಆಗಿದೆ ಎನ್ನಲಾಗುತ್ತಿದೆ.
ಇನ್ನು, ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ ಹೆಸರು ಕೂಡ ಮುಂಚೂಣಿಗೆ ಬಂದಿದೆ. ಒಂದು ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಿ ಮತ್ತೊಂದು ಸ್ಥಾನವನ್ನು ದಲಿತ ಸಮುದಾಯಕ್ಕೆ ನೀಡಲಿದ್ದು, ನಾರಾಯಣಸ್ವಾಮಿ ಹೆಸರನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಉಮೇಶ್ ಜಾಧವ್, ಹಿರಿಯ ನಾಯಕ ಬೀದರ್ ಸಂಸದ ಭಗವಂತ ಖೂಬಾ ಕೂಡ ಕೇಂದ್ರ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ.
ಆದರೆ, ಯಾರಿಗೂ ಈವರೆಗೆ ಅಧಿಕೃತವಾಗಿ ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿಲ್ಲ, ಕಡೆ ಕ್ಷಣದಲ್ಲಿ ಹೆಸರು ಪ್ರಕಟಿಸಲಾಗುತ್ತದೆ ಎನ್ನಲಾಗಿದೆ. ಆದರೂ ಸಂಸದ ನಾರಾಯಣ ಸ್ವಾಮಿ ಕುಟುಂಬ ಸಮೇತ ದೆಹಲಿಗೆ ತೆರಳಿರುವುದು ಅವರಿಗೆ ಅವಕಾಶ ಖಚಿತವಾಗಿರಬಹುದು ಎನ್ನಲಾಗುತ್ತಿದೆ.