ಬೆಂಗಳೂರು: ಸೆಪ್ಟೆಂಬರ್ 12ರಿಂದ ಹತ್ತು ದಿನ ವಿಧಾನಮಂಡಲ ಅಧಿವೇಶನ, ಹುತಾತ್ಮ ಯೋಧರ ಕುಟುಂಬದವರಿಗೆ ಅನುಕಂಪದ ಆಧಾರದಲ್ಲಿ ನೌಕರಿ ಕೊಡಲು ತೀರ್ಮಾನ, ಲೋಕಾಯುಕ್ತ ಬಲವರ್ಧನೆ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಹುತಾತ್ಮ ಯೋಧರ ಕುಟುಂಬಸ್ಥರಿಗೆ ಪರಿಹಾರ ಹಣ ಮತ್ತು ನಿವೇಶನ ಕೊಡುವುದರ ಬದಲು ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲು ತೀರ್ಮಾನಿಸಲಾಗಿದ್ದು, ಇನ್ನು ಮುಂದೆ ಅವರಿಗೆ ಸರ್ಕಾರದಿಂದ ನೀಡುತ್ತಿದ್ದ ಪರಿಹಾರ ಹಾಗೂ ನಿವೇಶನ ಸಿಗುವುದಿಲ್ಲ. ಸುಮಾರು 400 ಕುಟುಂಬಗಳಲ್ಲಿ 200 ಕುಟುಂಬಗಳು ಅರ್ಹವಾಗಿವೆ ಎಂದು ತಿಳಿಸಿದರು.
7 ಜಿಲ್ಲೆಗಳಲ್ಲಿ ವಿವಿ:ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ ಮಾಡಲು ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಪ್ಪಳ, ಕೊಡಗು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ತೆರೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪ್ರಮುಖ ಅಂಶಗಳು:
- ಲೋಕಾಯುಕ್ತ ಬಲಪಡಿಸಲು ಖಾಲಿ ಇರುವ ಹುದ್ದೆ ನೇಮಕಕ್ಕೆ ಗ್ರೀನ್ ಸಿಗ್ನಲ್.
- ಕೆ ಪಿಎಸ್ ಸಿ ನೇಮಕಾತಿಯಲ್ಲಿ ಡಿ ಗ್ರೂಪ್‌ಗೆ ಸಂದರ್ಶನ ಇರುವುದಿಲ್ಲ. ನೇರ ಪರೀಕ್ಷೆ ಮೂಲಕ ನೇಮಕ.
- ಕಪತ್ತಗುಡ್ಡ, ವನ್ಯಜೀವಿಧಾಮವೆಂದು ಘೋಷಣೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಅಲ್ಲಿ ಒಂದು ಕಿ.ಮಿ ವ್ಯಾಪ್ತಿ ಬೊಪರ್ ಝೋನ್.
- ರಾಜ್ಯದಲ್ಲಿ 4244 ಹೊಸ ಅಂಗನವಾಡಿ ಸ್ಥಾಪನೆಗೆ ಅನುಮೋದನೆ.
- ತುಮಕೂರು ಜಿಲ್ಲೆ ಶಿರಾದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂ ಪರಿಹಾರ.
- ಮಲ್ಪೆ ಬಂದರು ಅಭಿವೃದ್ಧಿಗೆ ಅನುಮೋದನೆ.
- ಲೋಕಾಯುಕ್ತದಲ್ಲಿ ಹೊರಗುತ್ತಿಗೆ ಮೇಲೆ ನಿವೃತ್ತ ನಾಲ್ಕು ಸಿಬ್ಬಂದಿ ನೇಮಕಕ್ಕೆ ಅನುಮೋದನೆ.
- ಲೋಕಾಯುಕ್ತದಲ್ಲಿ ನಿವೃತ್ತರಾಗಿರುವ 7 ಪಬ್ಲಿಕ್ ಪ್ರಾಸಿಕ್ಯೂಟರ್ಗಳು ಒಂದು ವರ್ಷ ಅವಧಿಯವರೆಗೆ ಮುಂದುವರಿಕೆ.
- ಕೊಂಕಣ ರೈಲ್ವೇಗೆ 74.56 ಕೋಟಿ ರೂ ನೀಡಲು ಅನುಮೋದನೆ.
- ರಾಜ್ಯ ಯೋಜನಾ ಆಯೋಗವನ್ನು ನೀತಿ ಆಯೋಗದ ಮಾದರಿ ರಚನೆಗೆ ಘಟನೋತ್ತರ ಅನುಮೋದನೆ.
- ವಿಜಯಪುರ ನ್ಯಾಯಾಲಯ ಸಂಕೀರ್ಣದಲ್ಲಿ ಕಟ್ಟಡ ಅಂದಾಜು ವೆಚ್ಚ 12 ಕೋಟಿ ರೂ. ಗೆ ಅನುಮೋದನೆ.
- ಹೆಬ್ರಿ ಮತ್ತು ಕಾರ್ಕಳ ತಾಲೂಕಿನಲ್ಲಿ 69 ಗ್ರಾಮಗಳಿಗೆ ಕುಡಿಯುವ ನೀರಿಗೆ ಜಲ ಜೀವನ ಮಿಷನ್ ಅಡಿಯಲ್ಲಿ 1600 ಕೋಟಿ ರೂ. ಗೆ ಅನುಮೋದನೆ.
- ಇಂಡಿಯನ್ ಜಿಮ್ಖಾನಾ ಸಂಸ್ಥೆಯಿಂದ ಲೀಸ್ಗೆ ನೀಡಲ್ಪಟ್ಟಿದ್ದ 3 ಎಕರೆ ಜಮೀನು ವಾಪಸ್ ಪಡೆದು ಸಾರ್ವಜನಿಕ ಉದ್ದೇಶಕ್ಕೆ ಮೈದಾನ ಮಾಡಲು ನಿರ್ಧಾರ.
- ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕ ಬಾಣಾವರ ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್‌ಗೆ 3 ಎಕರೆ ಜಮೀನು ಮಂಜೂರು.
- ಬೆಂಗಳೂರಿನ ಸಿಂಗೇನಹಳ್ಳಿ ಸಮೀಪ 42 ಎಕರೆಯಲ್ಲಿ 100 ಕೋಟಿ ಅನುದಾನದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿ ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಕ್ಕೆ ನಿರ್ಧಾರ.
- ವೈಟ್‌ಫೀಲ್ಡ್ ರೈಲು ನಿಲ್ದಾಣದ ಬಳಿ ರಸ್ತೆ ಮೇಲ್ಸೇತುವೆಗೆ 27 ಕೋಟಿ ರೂ. ಅನುದಾನ
- ಬಾಗಲಕೋಟೆ ಅನ್ನದಿನ್ನಿ ಏತ ನೀರಾವರಿ ಯೋಜನೆಗೆ 22 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ.
- ಶಿವಮೊಗ್ಗ, ಭದ್ರಾವತಿಯಲ್ಲಿ ಕುಡಿಯುವ ನೀರು ಯೋಜನೆಗೆ 48 ಕೋಟಿ ರೂ., ಸೇಡಂನಲ್ಲಿ ಕೆಎಸ್ ಆರ್ ಟಿಸಿ ಚಾಲನಾ ಮತ್ತು ಮೆಕ್ಯಾನಿಕಲ್ ಟ್ರೈನಿಂಗ್ ಸೆಂಟರ್ ನಿರ್ಮಾಣಕ್ಕೆ 14 ಕೋಟಿ ರೂ.
- ಬಿಬಿಎಂಪಿಯ ಪಂತರಪಾಳ್ಯದಲ್ಲಿ 150 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 32 ಕೋಟಿ ರೂ., 19 ಕೋಟಿ ವೆಚ್ಚದಲ್ಲಿ ಪೊಲೀಸ್ ಇಲಾಖೆಗೆ ಅಗತ್ಯ ವಾಹನಗಳ ಖರೀದಿಗೆ ನಿರ್ಧಾರ.
- ಸನ್ನಡತೆ ಆಧಾರದಲ್ಲಿ 84 ಜನ ಕೈದಿಗಳ ಬಿಡುಗಡೆಗೆ ಕೇಂದ್ರದಿಂದ ಒಪ್ಪಿಗೆ.
- ಯಾದಗಿರಿ ಜಿಲ್ಲೆಯಲ್ಲಿ ಸಾಯಿ ಸಿದ್ದಾಶ್ರಮಕ್ಕೆ ಜಮೀನು ಮಂಜೂರು.
- ಶ್ರೀನಿವಾಸ ಎಜುಕೇಶನ್ಗೆ ಶೈಕ್ಷಣಿಕ ಉದ್ದೇಶಕ್ಕಾಗಿ 3 ಎಕರೆ ಜಮೀನು ಮಂಜೂರು ಮಾಡಲಾಗಿದೆ.
ಇದನ್ನೂ ಓದಿ:ಬಿಬಿಎಂಪಿ ಚುನಾವಣೆ-2022 : ಕರಡು ಮತದಾರರ ಪಟ್ಟಿ ಪ್ರಕಟ