ಕರ್ನಾಟಕ

karnataka

ETV Bharat / state

ಯಜಮಾನ‌ ಇಲ್ಲದಿದ್ದರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಮನೆಯ 2ನೇ ಹಿರಿಯ ವ್ಯಕ್ತಿಯ ಖಾತೆಗೆ ವರ್ಗಾವಣೆ - 2024ರ ಸಾರ್ವತ್ರಿಕ ರಜಾ ದಿನಗಳಿಗೆ ಅನುಮೋದನೆ

Karnataka cabinet meeting decisions: ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಬಹುತೇಕ ಪ್ರಕರಣಗಳಲ್ಲಿ ಯಜಮಾನರು ಊರಿನಲ್ಲಿ ಇಲ್ಲದ ಕಾರಣ ತಾಂತ್ರಿಕ ಸಮಸ್ಯೆ ಆಗಿರುವುದರಿಂದ ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

siddaramaiah
ಸಿದ್ದರಾಮಯ್ಯ

By ETV Bharat Karnataka Team

Published : Nov 24, 2023, 6:54 AM IST

ಬೆಂಗಳೂರು: ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಡಿ ಯಜಮಾನರು ಇಲ್ಲದೇ ಇರುವ ಸಂದರ್ಭದಲ್ಲಿ ಮನೆಯ ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, 7.67 ಲಕ್ಷ ಅನರ್ಹ ಪಡಿತರ ಚೀಟಿಗಳ ವಿಷಯದಲ್ಲಿ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಯಜಮಾನರು ಊರಿನಲ್ಲಿ ಇಲ್ಲದ ಕಾರಣ ತಾಂತ್ರಿಕ ಸಮಸ್ಯೆ ಆಗಿರುವುದರಿಂದ ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸುವ ಕುರಿತಂತೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದರು.

2024ರ ಸಾರ್ವತ್ರಿಕ ರಜಾ ದಿನಗಳಿಗೆ ಅನುಮೋದನೆ:2024ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿ ಹಾಗೂ ಪರಿಮಿತ ರಜಾ ದಿನಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಅದರಂತೆ 2024 ಸಾಲಿನಲ್ಲಿ ಒಟ್ಟು 21 ದಿನಗಳನ್ನು ಸಾರ್ವತ್ರಿಕ ರಜಾ ದಿನಗಳೆಂದು ಘೋಷಿಸಲಾಗಿದೆ.

ಭಾನುವಾರಗಳಂದು ಬರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ಸೌರ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ಸೇರಿರುವುದಿಲ್ಲ. 1-4-2024 ರಂದು ವಾಣಿಜ್ಯ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನ ಆಗಿರುವುದರಿಂದ ಸದರಿ ದಿನದಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜಾ ಇರಲಿದೆ.

ಇತರೆ ತೀರ್ಮಾನಗಳು:

1) 2022-23ನೇ ಸಾಲಿಗೆ ಗುಣಮಟ್ಟ ವಿಚಲನೆ ಹೊಂದಿದ ಒಂದು ಜೊತೆ ಸಮವಸ್ತ್ರ ಪೂರೈಸಿರುವುದಕ್ಕೆ ವಿಳಂಬ ದಂಡ ಮತ್ತು ವಿಚಲನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ತಡೆಹಿಡಿಯಲಾದ ಮೊತ್ತವನ್ನು ಕೆ.ಎಸ್.ಟಿ.ಐ.ಡಿ.ಸಿ. ಸಂಸ್ಥೆಗೆ ಬಿಡುಗಡೆಗೆ ಸಮ್ಮತಿ.

2) ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಹೆಚ್ಚುವರಿ ಬಿಂದುಗಳನ್ನು ಗುರುತಿಸಲು ಮತ್ತು ಎದ್ದು ಕಾಣುವ ವಿಕಲಚೇತನರ ಮೀಸಲಾತಿಯನ್ನೊಳಗೊಂಡ ಒಂದೇ ರೋಸ್ಟರ್ ಸಿದ್ಧಪಡಿಸಲು ಒಪ್ಪಿಗೆ.

3) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2,731 ಆರೋಗ್ಯ ಸಂಸ್ಥೆಗಳಲ್ಲಿ ಜೈವಿಕ ವೈದ್ಯಕೀಯ ಸಲಕರಣೆಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ವಾರ್ಷಿಕ ವೆಚ್ಚ ರೂ. 32.74 ಕೋಟಿಗಳ ಅಂದಾಜು ವೆಚ್ಚದಲ್ಲಿ 3 ವರ್ಷಗಳ ಅವಧಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲು ಅನುಮೋದನೆ ನೀಡಲು ಒಪ್ಪಿಗೆ.

4) ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಆವರಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಕಾಮಗಾರಿಗೆ ರೂ.16.18 ಕೋಟಿಗಳ ಮತ್ತು ಸ್ನಾತಕ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ರೂ. 11.00 ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ.

5) ಪಾರ್ಶ್ವವಾಯು ಮತ್ತು ತಲೆಗೆ ತೀವ್ರ ಪೆಟ್ಟಾದ ರೋಗಿಗಳ ಆರೈಕೆಗಾಗಿ ಕರ್ನಾಟಕದಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯನ್ನು ಎರಡು ಹಂತಗಳಲ್ಲಿ ರೂ. 51.44 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು, ಮೊದಲನೇ ಹಂತದಲ್ಲಿ ನಿಮ್ಹಾನ್ಸ್, ಬೆಂಗಳೂರನ್ನು ಹಬ್ ಮತ್ತು ಕಿಮ್ಸ್ ಹುಬ್ಬಳ್ಳಿಯನ್ನು 'ಸ್ಪೋಕ್' ಆಗಿ ಕಾರ್ಯನಿರ್ವಹಿಸಲು ಒಟ್ಟು 11.26 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

6) ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ, ಹುಬ್ಬಳ್ಳಿ ಇವರಿಗೆ ಸಾಯಿ ಮಂದಿರಕ್ಕಾಗಿ ಲೀಸ್ ಆಧಾರದ ಮೇಲೆ ನೀಡಲಾಗಿದ್ದ ಹುಬ್ಬಳ್ಳಿ ವಿಭಾಗದ ಹಳೇ ಕೋರ್ಟ್ ಹತ್ತಿರ ಇರುವ ಹುಬ್ಬಳ್ಳಿ ಶಹರದ ಸಿ.ಟಿ.ಎಸ್. ನಂ. 498ರಲ್ಲಿನ ಲೋಕೋಪಯೋಗಿ ಇಲಾಖೆಯ 100/108 ವಿಸ್ತೀರ್ಣದ ಜಾಗವನ್ನು 5-02-2023 ಪೂರ್ವಾನ್ವಯವಾಗುವಂತೆ ಮುಂದಿನ 30 ವರ್ಷಗಳ ಅವಧಿಗೆ ಲೀಸ್ ಅವಧಿಯನ್ನು ವಿಸ್ತರಿಸಲು ಸಮ್ಮತಿ.

ಇದನ್ನೂ ಓದಿ :ಜಾತಿ ಗಣತಿ ವರದಿ ಇನ್ನೂ ಬಿಡುಗಡೆ ಆಗಿಲ್ಲ, ಅದರ ಚರ್ಚೆ ಅಗತ್ಯವಿಲ್ಲ : ಸಿಎಂ ಸಿದ್ದರಾಮಯ್ಯ

7) 2023-24 ರ ಶೈಕ್ಷಣಿಕ ವರ್ಷದಲ್ಲಿ 17 ಜಿಲ್ಲೆಗಳ 93 ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿನ 24,347 ಶಾಲೆಗಳಿಗೆ ರೂ. 20 ಕೋಟಿಗಳ ವೆಚ್ಚದಲ್ಲಿ ಪುಸ್ತಕ ಮತ್ತು ನಿಯತಕಾಲಿಕೆಗಳನ್ನು ಖರೀದಿಸಲು ಅನುಮೋದನೆ.

8) ಕಸ್ತೂರ್ಬಾ ಗಾಂಧಿ ಬಾಲಿಕೆ ಹಾಸ್ಟೆಲ್‌ಗಳಲ್ಲಿ ಡಾರ್ಮಿಟರಿ ನಿರ್ಮಾಣ, ವಸತಿ ಶಾಲೆಗಳ ದುರಸ್ತಿ ಮತ್ತು ಸ್ಮಾರ್ಟ್ ಕ್ಲಾಸ್ ರೂಂ ಅಭಿವೃದ್ಧಿ ಹಾಗೂ ವಸತಿ ಶಾಲೆ ಮತ್ತು ಹಾಸ್ಟೆಲ್‌ಗಳಿಗೆ ಬಂಕ್ವೆಟ್ ಕಾಟ್​ಗಳ ಖರೀದಿಗಾಗಿ ಒಟ್ಟು ರೂ.50 ಕೋಟಿಗಳ ಮೊತ್ತದ ಯೋಜನೆಗೆ ಅನುಮೋದನೆ.

9) ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಕೆರೂರು ಪಟ್ಟಣಗಳು ಹಾಗೂ ಮಾರ್ಗ ಮಧ್ಯದ 18 ಗ್ರಾಮಗಳಿಗೆ ಆಲಮಟ್ಟಿ ಜಲಾಶಯದ ಹಿನ್ನೀರು ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ರೂ. 250.36 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

10) ಎನ್‌ಜಿಟಿ ಪರಿಸರ ಪರಿಹಾರ ನಿಧಿಯಡಿ ತ್ವರಿತವಾಗಿ ಎರಡನೇ ಹಂತದ 53 ಆದ್ಯತೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 1,518 ಕೋಟಿ ಯೋಜನಾ ವೆಚ್ಚದಲ್ಲಿ ಕೆಯುಐಡಿಎಫ್​ಸಿಯಿಂದ ಒಳಚರಂಡಿ ವ್ಯವಸ್ಥೆಯ ನಿರ್ಮಾಣ, ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.

ABOUT THE AUTHOR

...view details